ನವದೆಹಲಿ, ಮೇ 30 (Daijiworld News/MSP): ದೆಹಲಿಯಿಂದ ಮಾಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅರ್ಧಕ್ಕೆ ವಾಪಸಾಗಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ಎ320 ವಿಮಾನ ವಾಪಸ್ ಆದ ಬಗ್ಗೆ ತನಿಖೆಗೆ ಆದೇಶ ನೀಡಿದೆ.
ದೆಹಲಿಯಿಂದ ಮಾಸ್ಕೋಗೆ ಭಾರತೀಯರನ್ನು ಕರೆತರಲು ಹೊರಟಿದ್ದ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ವಂದೇ ಭಾರತ್ ಮಿಷನ್ ಅಡಿ ಮಾಸ್ಕೋದಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ತೆರಳುತ್ತಿದ್ದಾಗ ಉಜ್ಬೇಕಿಸ್ಥಾನ್ ವಾಯುನೆಲೆ ಬಳಿ ಪೈಲೆಟ್ಗೆ ಕೋವಿಡ್ - 19 ಸೋಂಕು ಇರುವುದು ಖಚಿತವಾಗಿದ್ದು, ವಿಮಾನವನ್ನು ವಾಪಸ್ ಕರೆತರಲು ಅನುಮತಿ ಕೇಳಲಾಯಿತು. ಅಲ್ಲಿಂದ ವಾಪಾಸ್ ಆದ ವಿಮಾನ ಮಧ್ಯಾಹ್ನ 12.30ರ ಸುಮಾರಿಗೆ ದೆಹಲಿಗೆ ಬಂದಿದೆ. ಆ ಬಳಿಕ ಕ್ರ್ಯೂಅನ್ನು ಕೂಡ ಕ್ವಾರಂಟೈನ್ನಲ್ಲಿರಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ.
ವಿಮಾನದ ಪೈಲೆಟ್ನ ಕೋವಿಡ್ - 19 ಪರೀಕ್ಷೆ ವರದಿ ಬರುವ ಮೊದಲೇ ವಿದೇಶಕ್ಕೆ ತೆರಳಲು ಅನುಮತಿ ಸಿಕ್ಕಿದ್ದು ಹೇಗೆ? ಎಂಬ ಬಗ್ಗೆ ತನಿಖೆ ನಡೆಯಲಿದೆ ಎಂದು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ ತಿಳಿಸಿದೆ.
ಲಾಕ್ಡೌನ್ ಆರಂಭವಾದಾಗಿನಿಂದಲೂ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಅದಕ್ಕಾಗಿ ವಂದೇ ಭಾರತ್ ಮಿಷನ್ ಎನ್ನುವ ಯೋಜನೆ ಜಾರಿಗೊಳಿಸಿದೆ. ಹಾಗೆಯೇ ಮಾಸ್ಕೋದಲ್ಲಿದ್ದ ಭಾರತೀಯರನ್ನು ಕರೆತರಲು ವಿಮಾನ ತೆರಳುತ್ತಿತ್ತು.