ಬೆಂಗಳೂರು, ಮೇ 30 (DaijiworldNews/PY) : ಹಕ್ಕುಚ್ಯುತಿ ದೂರನ್ನು ನಾವು ಸಲ್ಲಿಸಬೇಕೇ, ಬೇಡವೇ ಎಂಬ ಪ್ರಶ್ನೆಯಿದೆ. ಜೂನ್ 2ರಂದು ಸಮಿತಿ ಸಭೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಅವರು ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ಸಮಿತಿ ಕಾರ್ಯಭಾರಕ್ಕೆ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಅಡ್ಡಿಯಾಗಿದೆ ಎಂದು ತಿಳಿಸಿದರು.
ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಪರಿಶೀಲನೆಗೆ ಲೆಕ್ಕಪತ್ರ ಸಮಿತಿ ಭೇಟಿಗೆ ಅವಕಾಶ ಕಲ್ಪಿಸಿಲ್ಲ. ಸ್ಪೀಕರ್ ಅವರು ಆದೇಶ ನೀಡುವ ಮೂಲಕ ಶಾಸನ ಸಭೆಯ ಕರ್ತವ್ಯಕ್ಕೆ ಧಕ್ಕೆಯಾಗಿದೆ. ನಮ್ಮ ಕರ್ತವ್ಯಕ್ಕೆ ಇದು ಚ್ಯುತಿ ಮಾಡುವ ಯತ್ನವಾಗಿದೆ ಎಂದರು.
ಎಷ್ಟು ಹಣಕ್ಕೆ ವೆಂಟಿಲೇಟರ್ ಖರೀದಿ ಮಾಡಿದ್ದೀರಿ. ಮಾಸ್ಕ್, ಸ್ಯಾನಿಟೈಸರ್ ಎಷ್ಟಕ್ಕೆ ಖರೀದಿ ಮಾಡಿದ್ದೀರಿ. ಸಾರ್ವಜನಿಕರ ಮುಂದೆ ಈ ಬಗ್ಗೆ ಬಹಿರಂಗ ಪಡಿಸಿ ಎಂದು ಆರೋಗ್ಯ ಸಚಿವ ಶ್ರೀರಾಮಲು ಅವರು ಪಾಟೀಲ ಅವರಿಗೆ ಕೇಳಿದರು.
ಇನ್ನು ಪಿಪಿಇ ಕಿಟ್ನಲ್ಲಿ ಅವ್ಯವಹಾರ ನಡೆದಿಲ್ಲ ಎಂಬ ಸಚಿವ ರಮೇಶ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವ್ಯವಹಾರದ ದೂರು ಬಂದ ಕಾರಣ ನಾವು ಅದನ್ನು ಪರಶೀಲನೆ ಮಾಡಲು ಹೊರಟಿದ್ದು. ಕಾಂಗ್ರೆಸ್ನವರು ಪರಿಶೀಲನೆಗೆ ಹೊರಟಿಲ್ಲ ಸಮಿತಿ ಪರಿಶೀಲನೆಗೆ ಹೊರಟಿದ್ದು ಎಂದು ತಿಳಿಸಿದರು.