ಬೆಂಗಳೂರು, ಮೇ 30 (Daijiworld News/MSP): ಪಾದರಾಯನಪುರ ವಾರ್ಡ್'ನ ಜೆಡಿಎಸ್ ಪಕ್ಷದ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾರಲ್ಲಿ ಶುಕ್ರವಾರ ಕೊರೋನಾ ವೈರಸ್ ಇರುವುದು ದೃಢಪಟ್ಟಿದ್ದು, ಆದರೆ ಆ ಬಳಿಕವೂ ಆಸ್ಪತ್ರೆಗೆ ತರಳದೇ ಮನೆಯಲ್ಲಿದ್ದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ಕೊಟ್ಟಿದ್ದಾರೆ.
ಕಂಟೈನ್ಮೆಂಟ್ ಝೋನ್ನಲ್ಲಿ ಓಡಾಡಿದ್ದ ಇಮ್ರಾನ್ ಪಾಷಾ ಅವರು ಶುಕ್ರವಾರ ಬೆಳ್ಳಗ್ಗೆ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಸಂಜೆ ಬಂದ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಆದರೆ ಚಿಕಿತ್ಸೆಗೆ ತೆರಳದೆ ವಿರೋಧ ವ್ಯಕ್ತಪಡಿಸಿದ್ದರು.
ಬಿಬಿಎಂಪಿ ಕಾರ್ಪೊರೇಟರ್ ಆಗಿರುವ ಇನ್ರಾನ್ ಪಾಷಾ ಅವರ ಈ ನಡವಳಿಕೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ . ಯಾರೇ ಆದರೂ ಕೊರೊನಾ ವೈರಸ್ ದೃಢಪಟ್ಟ ಬಳಿಕ ಅವರು ಚಿಕಿತ್ಸೆಗೆ ಸಹಕರಿಸಬೇಕು. ಇನ್ನು ಕಾರ್ಪೊರೇಟರ್ ಆಗಿರುವ ಇನ್ರಾನ್ ಪಾಷಾ ಆಸ್ಪತ್ರೆಗೆ ಸೇರಿಕೊಂಡು ಚಿಕಿತ್ಸೆ ಪಡೆಯಬೇಕಿತ್ತು, ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವುದು ಸರಿಯಲ್ಲ. ಹೀಗೆ ಮಾಡಿದ್ರೆ ಸರ್ಕಾರದಿಂದ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೋವಿಡ್ ಸೋಂಕು ದೃಢಪಟ್ಟ ಬಳಿಕ ಮುಚ್ಚಿಟ್ಟುಕೊಂಡರೆ ಅವರಿಂದ ಎಲ್ಲರಿಗೂ ಸಮಸ್ಯೆ ಆಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ಕೊಟ್ಟಿದ್ದಾರೆ.
ಸರ್ಕಾರದ ವಾರ್ನಿಂಗ್ ಬಳಿಕ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಕಾರ್ಪೊರೇಟರ್ ಇಮ್ರಾನ್ ಪಾಷಾ ಮನವೊಲಿಸಿ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದ್ದರು. ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಆಂಬುಲೆನ್ಸ್ನಲ್ಲಿ ಪಾಷಾ ಹಾಗೂ ಅವರ ಸಂಬಂಧಿಕರಾದ ಮೂವರನ್ನು ಕರೆದುಕೊಂಡು ಹೋಗಿದ್ದಾರೆ.
ರಾಜ್ಯದಲ್ಲಿ ಜನಪ್ರತಿನಿಧಿಯೊಬ್ಬರಲ್ಲಿ ವೈರಸ್ ದೃಢಪಟ್ಟಿರುವುದು ಇದೇ ಮೊದಲಾಗಿದೆ. ಈ ನಡುವೆ ಇಮ್ರಾನ್ ಪಾಷಾ ಅವರೊಂದಿಗೆ ಸಂಪರ್ಕದಲ್ಲಿದ್ದ ಅವರ ಪತ್ನಿ, ಇಬ್ಬರು ಮಕ್ಕಳು, ಕಾರು ಚಾಲಕ, ಮನೆ ಕೆಲಸದ ಸಿಬ್ಬಂದಿ, ಬೆಂಬಲಿಗರು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಇದರೊಂದಿಗೆ ಕಾರ್ಪೊರೇಟರ್ ಆಗಿದ್ದುಕೊಂಡು ಈ ರೀತಿ ಕೊರೊನಾ ವೈರಸ್ ಚಿಕಿತ್ಸೆಗೆ ನಿರಾಕರಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ.