ನವದೆಹಲಿ, ಮೇ 30 (DaijiworldNews/PY) : ದೆಹಲಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ, ಅದನ್ನು ನಾವು ಒಪ್ಪುತ್ತೇವೆ. ಆದರೆ, ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮಗೆ ಭರವಸೆ ನೀಡುತ್ತಿದ್ದೇನೆ ನಾವು ಪೂರ್ಣ ಸಜ್ಜಾಗಿದ್ದೇವೆ. ನಾವು ಶಾಶ್ವತ ಲಾಕ್ಡೌನ್ನಲ್ಲಿ ಇರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಈ ಬಗ್ಗೆ ದೆಹಲಿಯ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ನಿಯಂತ್ರಣ ಮಾಡುವ ಸಲುವಾಗಿ ದೇಶದಾದ್ಯಂತ ಮೇ 31ರವರೆಗೂ ಲಾಕ್ಡೌನ್ ಜಾರಿಯಲ್ಲಿದೆ. ದೇಶ ಶಾಶ್ವತ ಲಾಕ್ಡೌನ್ನಲ್ಲಿ ಉಳಿಯುವಂತಿಲ್ಲ. ಇದು ಕಾಳಜಿಯ ಪ್ರಶ್ನೆ. ಭಯ ಪಡಬೇಕಾಗಿಲ್ಲ. ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು ಪೂರ್ಣ ಸಜ್ಜಾಗಿದ್ದೇವೆ ಎಂದು ತಿಳಿಸಿದರು.
ದೆಹಲಿಯಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಪೈಕಿ 2,100 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಅವರ ಮನೆಗಳಲ್ಲಿಯೇ ಚಿಕಿತ್ಸೆಗೆ ಒಳಗಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ 6,500 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಹಾಗೂ ಮುಂದಿನ ವಾರದಲ್ಲಿ ಇನ್ನೂ 9,500 ಹಾಸಿಗೆಗಳು ಸಿದ್ಧವಾಗಲಿವೆ. ಬಹಳಷ್ಟು ಜನ ಚೇತರಿಸಿಕೊಳ್ಳುತ್ತಿದ್ದಾರೆ, ಮನೆಗಳಲ್ಲಿಯೇ ಗುಣಮುಖರಾಗುತ್ತಿದ್ದಾರೆ. ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಇಂದು ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು 17,386 ತಲುಪಿದ್ದು, 398 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿದ್ದು, ನಂತರದ ಸ್ಥಾನಗಳಲ್ಲಿ ತಮಿಳು ನಾಡು, ದೆಹಲಿ ಹಾಗೂ ಗುಜರಾತ್ ಇವೆ.
ಪ್ರತಿನಿತ್ಯ 1,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾದರೂ ಸರ್ಕಾರ ಅದನ್ನು ನಿರ್ವಹಿಸಲು ಸಜ್ಜಾಗಿರುವುದಾಗಿ ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಶುಕ್ರವಾರ ಹೇಳಿದ್ದರು. ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಳ್ಳದ ಕೊರೊನಾ ದೃಢಪಟ್ಟಿರುವ ರೋಗಿಗಳು ಭಯಪಡದೇ, ಆಸ್ಪತ್ರೆಗೆ ದಾಖಲಾಗದೇ ಮನೆಯೊಳಗೆ ಪ್ರತ್ಯೇಕವಾಗಿರಲು ದೆಹಲಿ ಸರ್ಕಾರ ಅವಕಾಶ ನೀಡಿದೆ. ಸೋಂಕಿತರು ಹೋಂ ಕ್ವಾರಂಟೈನ್ನಲ್ಲಿ ಮಾಡಬೇಕಾಗಿರುವ ಹಾಗೂ ಮಾಡಬಾರದಂತಹ ಚಟುವಟಿಕೆಗಳ ಬಗ್ಗೆ ವಿಡಿಯೋವೊಂದನ್ನು ನ್ಯೂಸ್ ಚಾನೆಲ್ಗಳ ಮೂಲಕ ಪ್ರಸಾರ ಮಾಡಲಾಗಿತ್ತು.