ಚಿಕ್ಕೋಡಿ, ಮೇ 30 (DaijiworldNews/PY) : ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಜನರಲ್ಲಿ ಅತೀ ಹೆಚ್ಚು ಸೋಂಕು ಕಂಡುಬಂದಿದೆ. ಇನ್ನೂ ಹೆಚ್ಚಳವಾಗುತ್ತಿದೆ. ಆದ್ದರಿಂದ ರಾಜ್ಯ ಪ್ರವೇಶಕ್ಕೆ ಇ-ಪಾಸ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇ-ಪಾಸ್ ಇಲ್ಲದೆ ಬರುತ್ತಿರುವವರನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಬಳಿ ಇರುವ ಅಂತರ್ರಾಜ್ಯ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲಿಸಿ, ಬಳಿಕ ಅಧಿಕಾರಿಗಳ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಕೊರೊನಾ ವಾರಿಯರ್ಸ್ಗಳಿಗೂ ಕೊರೊನಾ ಸೋಂಕು ವ್ಯಾಪಿಸುತ್ತಿರುವ ನಿಟ್ಟಿನಲ್ಲಿ ಮುಂಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. ಈವರೆಗೆ ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರದ ರಾಜ್ಯಗಳಿಂದ 48,442 ವಾಹನಗಳಲ್ಲಿ 1.49 ಲಕ್ಷ ಜನ ರಾಜ್ಯಕ್ಕೆ ಆಗಮಿಸಿದ್ದಾರೆ. ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿ 28 ಅಂತರ್ರಾಜ್ಯ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಕೊರೊನಾ ನಿಯಂತ್ರಣದಲ್ಲಿ ಗಡಿ ಭಾಗದ ಚೆಕ್ಪೋಸ್ಟ್ ಪಾತ್ರ ಪ್ರಮುಖವಾಗಿದೆ. ಸೇವಾ ಸಿಂಧು ಮೂಲಕ ಇ-ಪಾಸ್ ಪಡೆದುಕೊಂಡು ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡುವ ಮೂಲಕ ಅತ್ಯುತ್ತಮ ಕೆಲಸ ಮಾಡಲಾಗುತ್ತಿದೆ. ಇ-ಪಾಸ್ ನೀಡುವುದನ್ನು ಕಳೆದ ವಾರದಿಂದ ಸ್ಥಗಿತಗೊಳಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಇನ್ನು ಕಾರ್ಯನಿರ್ವಹಿಸಲಾಗುವುದು. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸೇರಿದಂತೆ ಎಲ್ಲರೂ ಹಗಲಿರುಳು ಶ್ರಮವಹಿಸಿ ಉತ್ತಮ ಕಾರ್ಯ ಮಾಡುತ್ತಿದ್ದೀರಿ ಎಂದರು.
ಹಾಸದದ ಪೊಲೀಸರು ನಿಪ್ಪಾಣಿಯಿಂದ ವಾಪಾಸ್ಸಾದ ನಂತರ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಗೂ ಕಡ್ಡಾಯವಾಗಿ ಕೊರೊನಾ ತಪಾಸಣೆ ಮಾಡಿಸಬೇಕು. ಫ್ರಂಟ್ ಲೈನ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಉಪಯೋಗಿಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸೂಚಿಸಿದರು.