ಬೆಂಗಳೂರು, ಮೇ 31 (Daijiworld News/MB) : ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭ ಬಾಯ್ ಪ್ರತಿಮೆ ಮಾದರಿಯಲ್ಲಿ ಆನೇಕಲ್ ಸಮೀಪ ಮುತ್ಯಾಲಮಡುವಿನಲ್ಲಿ 120 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುವ ಚಿಂತನೆ ನಡೆಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಷ್ಟ್ರೀಯ ಉದ್ಯಾನ ಬನ್ನೇರುಘಟ್ಟದಿಂದ 10ರಿಂದ 12 ಕಿ.ಮೀ ದೂರದಲ್ಲಿ ಮುತ್ಯಾಲಮಡುವಿನಲ್ಲಿ 180 ಎಕರೆ ಜಮೀನಿದೆ. ಅದನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಪ್ರತಿಮೆ ನಿರ್ಮಾಣದ ಕುರಿತಾದ ಚಿಂತನೆಯಷ್ಟೇ ನಡೆಸಲಾಗಿದ್ದು ಈ ಯೋಜನೆ ಪ್ರಾಥಮಿಕ ಹಂತದಲ್ಲಿದೆ. ಇನ್ನೂ ಕೂಡಾ ಈ ಯೋಜನೆಗೆ ಎಷ್ಟು ಹಣ ವ್ಯಯ ಮಾಡಬೇಕಾದೀತು ಎಂಬುದರ ಲೆಕ್ಕಾಚಾರವಾಗಿಲ್ಲ ಎಂದಿದ್ದಾರೆ.