ಬೆಂಗಳೂರು, ಮೇ 31 (Daijiworld News/MB) : ಆಂತರಿಕ ಕಚ್ಚಾಟದಿಂದಲೇ ರಾಜ್ಯ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ರಾಜ್ಯದ ಒಳಿತಿನ ದೃಷ್ಟಿಯಿಂದ ಈ ಸರ್ಕಾರ ಆಡಳಿತ ಕಳೆದುಕೊಳ್ಳುವುದು ಒಳ್ಳೆಯದು. ಬಿಜೆಪಿಯಲ್ಲಿರುವ ಆಂತರಿಕ ಕಚ್ಚಾಟಕ್ಕೆ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಒಳಗಿನ ಕಚ್ಚಾಟದಿಂದ ಸರ್ಕಾರ ಬಿದ್ದರೆ ಅದರ ಹೊಣೆ ಕಾಂಗ್ರೆಸ್ ಹೊರುವುದಿಲ್ಲ ಎಂದು ಟೀಕೆ ಮಾಡಿದ್ದಾರೆ.
ನನ್ನನ್ನು ಶಾಸಕ ಉಮೇಶ ಕತ್ತಿ ಭೇಟಿಯಾಗುವ ಯತ್ನ ಮಾಡಿದ್ದರು ಎಂಬುವುದೆಲ್ಲಾ ಊಹಾಪೋಹ ಎಂದೂ ಕೂಡಾ ಹೇಳಿದರು.
ಇನ್ನು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ ಅವರು, ತಮ್ಮ ಪಕ್ಷದೊಳಗೆ ನಡೆಯುತ್ತಿರುವ ಕಚ್ಚಾಟ ಬಹಿರಂಗವಾಗಿ ಕಾಣಬಾರದು ಎಂಬ ಕಾರಣದಿಂದಾಗಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಜಾರಕಿಹೊಳಿ ಪಕ್ಷ ತ್ಯಜಿಸಿದ ಸಂದರ್ಭದಲ್ಲಿ ಮಹೇಶ್ ಕುಮಠಳ್ಳಿ ಬಿಟ್ಟರೆ ಬೇರೆ ಶಾಸಕರು ಅವರ ಜೊತೆ ಇರಲಿಲ್ಲ. ಆಗ ಹಣ ಮತ್ತು ಅಧಿಕಾರದ ಆಸೆಯಿಂದ ಪಕ್ಷಾಂತರ ಮಾಡಿದ್ದು ಜೆಡಿಎಸ್ನ ಮೂವರು, ಕಾಂಗ್ರೆಸ್ನ 14 ಮಂದಿ ಎಂದು ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ ಸಿದ್ಧರಾಮಯ್ಯ ಅವರು, ಮೋದಿಯವರು ಸಿದ್ದರಾಮಯ್ಯ ಸರ್ಕಾರ ಹತ್ತು ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಎಷ್ಟು ಪರ್ಸೆಂಟ್ ಸರ್ಕಾರ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಈ ಮಾತನ್ನು ಕತ್ತಿಯವರ ಮನೆಯಲ್ಲಿ ಊಟಕ್ಕೆ ಸೇರಿದ್ದ ಶಾಸಕರೇ ಹೇಳಿದ್ದಾರೆ. ಆರ್ಥಿಕವಾಗಿ ದೇಶವನ್ನು ದಿವಾಳಿ ಮಾಡಿದ್ದೇ ಮೋದಿಯವರ ದೊಡ್ಡ ಸಾಧನೆ. ಅವರು ಸುಳ್ಳುಗಳ ಸರಮಾಲೆಯನ್ನೇ ಪೋಣಿಸುತ್ತಿದ್ದು ಅದು ಆರನೇ ವರ್ಷದಲ್ಲೂ ಮುಂದುವರೆದಿದೆ ಎಂದು ಹೇಳಿದರು.