ಬೆಂಗಳೂರು, ಮೇ 31 (Daijiworld News/MB) : ಒಂದೇ ಕಡೆಯಲ್ಲಿ ನೂರಾರು ಮೌಲ್ಯಮಾಪಕರ ಸೇರಿಸಿ ಸರ್ಕಾರ ಅನಾಹುತವನ್ನು ಸೃಷ್ಟಿ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಾಗಿ ಅವರು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಒಂದೇ ಕಡೆಯಲ್ಲಿ ನೂರಾರು ಉಪನ್ಯಾಸಕರು ಸೇರುವುದರಿಂದ ಕೊರೊನಾ ವೈರಸ್ ಇರುವ ಈ ಸಂದರ್ಭದಲ್ಲಿ ಭಾರೀ ಅನಾಹುತ ಉಂಟಾಗಬಹುದು. ಈಗಾಗಲೇ ನಂಜನಗೂಡು ಪ್ರಕರಣ, ತಬ್ಲೀಗ್ ಸಮಾವೇಶದಲ್ಲಿ ಭಾಗಿಯಾದ ನೂರಾರು ಜನರಿಗೆ ಕೊರೊನಾ ಹರಡಿದೆ. ಇನ್ನೊಂದು ಪ್ರಕರಣವಾಗುವ ಮುನ್ನವೇ ಸರ್ಕಾರ ಈ ವಿಚಾರದಲ್ಲಿ ಎಚ್ಚೆತ್ತು ಕ್ರಮಕೈಗೊಳ್ಳಬೇಕು. ಇಲ್ಲವಾದ್ದಲ್ಲಿ ಭಾರೀ ದೊಡ್ಡ ಅನಾಹುತ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ಹಾಜರಾಗಲು ಉಪನ್ಯಾಸಕರಿಗೆ ಒತ್ತಡ ಹಾಕುತ್ತಿರುವ ಬಗ್ಗೆ ಇಲಾಖೆ ವಿರುದ್ಧವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ಈಗ ಎಲ್ಲೆಡೆ ಹರಡುತ್ತಿರುವಾಗ ಮೌಲ್ಯಮಾಪನ ಕೇಂದ್ರಗಳಲ್ಲಿ ಭಾರೀ ಅನಾಹುತ ಉಂಟಾಗುವ ಸಾಧ್ಯತೆಯಿದೆ. ಮೊದಲು ಸರ್ಕಾರ ಮೌಲ್ಯಮಾಪಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.