ಆಗ್ರಾ, ಮೇ 31 (DaijiworldNews/PY) : ಆಗ್ರಾದಲ್ಲಿ ಶುಕ್ರವಾರ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಮೂರು ಜನ ಸಾವನ್ನಪ್ಪಿದ್ದಾರೆ ಹಾಗೂ ಐತಿಹಾಸಿಕ ತಾಜ್ಮಹಲ್ನ ಅಮೃತಶಿಲೆಯ ಅಡ್ಡಕಂಬಿಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಂಡಮಾರುತದ ಪರಿಣಾಮ ತಾಜ್ಮಹಲ್ ಸಂಕೀರ್ಣದಲ್ಲಿರುವ ಮರಗಳು ಧರೆಗುರುಳಿವೆ ಹಾಗೂ ಸ್ಮಾರಕದ ಅಮೃತಶಿಲೆಯ ಅಡ್ಡಕಂಬಿಗೆ ಹಾನಿಯಾಗಿದೆ ಎಂದು ಭಾರಿತೀಯ ಪುರಾತತ್ವ ಸಮೀಕ್ಷೆಯ ಶಾಸ್ತ್ರಜ್ಞ ಅಧೀಕ್ಷಕ ಬಸಂತ್ ಕುಮಾರ್ ಸ್ವರ್ಣಕರ್ ತಿಳಿಸಿದ್ದಾರೆ.
ಭಾರಿ ಮಳೆಯ ಪರಿಣಾಮ ಮೂವರು ಹಾಗೂ ಹಲವಾರು ಪ್ರಾಣಿಗಳು ಸಾವನ್ನಪ್ಪಿದ್ದು, ಕೆಲ ಮನೆಗಳಿಗೂ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದೇವೆ ಹಾಗೂ ನಷ್ಟವನ್ನೂ ಸರಿದೂಗಿಸುತ್ತೇವೆ. ಜಿಲ್ಲಾಡಳಿತವು ಮೃತರ ರಕ್ತಸಂಬಂಧಿಗಳಿಗೆ 4 ಲಕ್ಷ ಪರಿಹಾರವನ್ನು ನೀಡಲಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಯೋಗೇಂದ್ರ ಕುಮಾರ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಯಮುನಾ ನದಿಯ ಕಡೆಗಿರುವ ತಾಜ್ಮಹಲ್ನ ಹಿಂಭಾಗದಲ್ಲಿರುವ ಅಮೃತಶಿಲೆಯ ಅಡ್ಡಕಂಬಿಗಳ ಒಂದು ಭಾಗ ಬಿದ್ದು ಕೆಂಪು ಮರಳುಗಲ್ಲಿನ ಕಂಬಿಗಳ ಎರಡೂ ಫಲಕಗಳು ಹಾನಿಯಾಗಿವೆ. ಟಿಕೇಟ್ ನೀಡುವ ಪ್ರದೇಶದ ಪಶ್ಚಿಮ ಗೇಟ್ ಹಾಗೂ ಫ್ರಿಸ್ಕಿಂಗ್ ಗೇಟ್ಗಳಿಗೆ ಹಾನಿಯಾಗಿದೆ. ತಾಜ್ಮಹಲ್ ಆವರಣದಲ್ಲಿರುವ ಸುಮಾರು ಹತ್ತು ಮರಗಳನ್ನು ಕಿತ್ತುಹಾಕಲಾಗಿದೆ.