ಬೆಂಗಳೂರು, ಮೇ 31 (Daijiworld News/MB) : ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಸೋಂಕು ತಗುಲಿದ ಕಾರಣ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಹೆಚ್ಚಿನ ಜನರು ನೆರೆದಿದ್ದು ಈ ಹಿನ್ನಲೆಯಲ್ಲಿ ಕಾಪೋರೇಟರ್ ಇಮ್ರಾನ್ ಪಾಷಾ ಹಾಗೂ ಅವರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೂತ, ಈ ಕುರಿತಾಗಿ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ದೂರು ನೀಡಿದ್ದು ಸಾಂಕ್ರಾಮಿಕ ರೋಗ ಹರಡಲು ಪ್ರಯತ್ನಿಸಿದ ಹಾಗೂ ಅಕ್ರಮವಾಗಿ ಗುಂಪು ಸೇರಿದ್ದ ಆರೋಪದಡಿ ಇಮ್ರಾನ್ ಪಾಷಾ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರ ಕೊರೊನಾ ಸೋಂಕಿನ ಪರೀಕ್ಷಾ ವರದಿ ಪಾಸಿಟಿವ್ ಬಂದ ಕೂಡಲೇ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಆಂಬುಲೆನ್ಸ್ ಸಮೇತವಾಗಿ ಅವರ ಮನೆಗೆ ತೆರಳಿದ್ದು ಈ ಸಂದರ್ಭದಲ್ಲಿ ನೂರಾರು ಜನರು ಅಲ್ಲಿ ನೆರೆದಿದ್ದರು.
ಈ ಸಂದರ್ಭದಲ್ಲಿ ಕೊರೊನಾ ಸೋಂಕು ತನಗೆ ಇದ್ದರೂ ಕೂಡಾ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಇಮ್ರಾನ್ ಪಾಷಾ ಓಡಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದ್ದು ಈ ಕುರಿತಾಗಿ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.