ನವದೆಹಲಿ, ಮೇ 31 (Daijiworld News/MB) : ಕೊರೊನಾ ಲಾಕ್ಡೌನ್ ಸಡಿಲಿಕೆಯಾದರೂ ಜನರು ಇನ್ನಷ್ಟು ಎಚ್ಚರವಾಗಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ದೇಶವನ್ನುದ್ಧೇಶಿಸಿ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಕಳೆದ ಬಾರಿ ನಾನು ನಿಮ್ಮೊಂದಿಗೆ ಮಾತನಾಡಿದಾಗ ರೈಲು, ಬಸ್ ಹಾಗೂ ವಿಮಾನ ಸಂಚಾರಗಳು ಬಂದ್ ಆಗಿದ್ದವು. ಆದರೆ ಈಗ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು ಮುಂಜಾಗ್ರತಾ ಕ್ರಮಗಳೊಂದಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹೀಗಿರುವಾಗ ಇನ್ನಷ್ಟು ಜಾಗರೂಕತೆಯಿಂದ ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಮಿಡತೆ ಹಾವಳಿ ಹೆಚ್ಚಾಗಿರುವ ಕುರಿತಾಗಿ ಮಾತನಾಡಿದ ಅವರು, ಮಿಡತೆಗಳ ಹಾವಳಿ ನಿಯಂತ್ರಣಕ್ಕೆ ಕೃಷಿ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳು ಹೋರಾಟ ನಡೆಸುತ್ತಿದೆ ಎಂದು ಹೇಳಿದರು.
ಭಾರತದ ಜನಸಂಖ್ಯೆ ಇತರ ದೇಶಕ್ಕಿಂತ ಅಧಿಕವಿದ್ದರೂ ನಾವೆಲ್ಲರೂ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ. ಬೇರೆ ದೇಶಕ್ಕೆ ಹೋಲಿಸಿದಾಗ ನಮ್ಮಲ್ಲಿ ಕೊರೊನಾ ಹೆಚ್ಚು ಹರಡಿಲ್ಲ. ಇದೀಗ ಆರ್ಥಿಕ ಚಟುವಟಿಕೆ ಆರಂಭವಾಗಿದ್ದು ಸಾಮಾಜಿಕ ಅಂತರ ಕೂಡಾ ಹೆಚ್ಚಾಗಬೇಕು. ಹೆಚ್ಚಾಗಿ ಮನೆಯಲ್ಲೇ ಇರಲೂ ಪ್ರಯತ್ನಿಸಿ, ಎಲ್ಲರ ಸಹಕಾರದಿಂದ ಕೊರೊನಾ ವಿರುದ್ಧ ಹೋರಾಟ ಬಲಗೊಳಲಿದೆ ಎಂದು ಹೇಳಿದರು.
ನಾವೆಲ್ಲರೂ ಸೇರಿ ಕೊರೊನಾ ವಿರುದ್ಧ ಹೋರಾಡುತ್ತಿರುವ ಕಾರಣದಿಂದಾಗಿ ಕೊರೊನಾ ಸಾಂಕ್ರಾಮಿಕದ ವೇಗಗತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದ ಪ್ರಧಾನಿ ಮೋದಿ ಈ ನಿಟ್ಟಿನಲ್ಲಿ ಎಲ್ಲಾ ದೇಶವಾಸಿಗಳಿಗೂ ಧನ್ಯವಾದ ಸಲ್ಲಿಸಿದರು.
ಇನ್ನು ಈ ಸಂದರ್ಭದಲ್ಲಿ ತಮಿಳುನಾಡಿನ ಸಿ ಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಕೂಡಿಟ್ಟಿದ್ದ ಸಂಪೂರ್ಣ ರೂ.5 ಲಕ್ಷ ಹಣವನ್ನು ಲಾಕ್ಡೌನ್ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡಿರುವುದನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಇಂತಹ ಘಟನೆಗಳು ದೇಶದಾದ್ಯಂತ ನಡೆಯುತ್ತಲ್ಲೇ ಇರುವುದು ಸಂತಸದ ವಿಷಯ. ಸೇವಾಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ಅಭಿನಂದನೆ ಎಂದು ಹೇಳಿದರು.
ನಮೋ ಆಪ್ ಮೂಲಕವಾಗಿ ಜನರು ಅವರ ಸಮಸ್ಯೆಯನ್ನು ತಿಳಿಸಿದ್ದಾರೆ. ನಮ್ಮ ದೇಶ, ನಮ್ಮ ರಾಜ್ಯ, ನಮ್ಮ ಊರು ಮತ್ತು ಗ್ರಾಮಗಳಲ್ಲಿ ಆತ್ಮನಿರ್ಭರ್ ಮಂತ್ರ ಪಠಿಸಬೇಕಿದೆ. ಈ ಹೋರಾಟ ಭಾರತದ ಭವಿಷ್ಯಕ್ಕೆ ಒಂದು ಪಾಠವಾಗಲಿದೆ ಎಂದರು.
ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಸಲಕರಣೆಗಳನ್ನು ಕಂಡು ಹಿಡಿಯಲಾಗುತ್ತಿದೆ. ಟ್ರ್ಯಾಕ್ಟರ್ ಗಳ ಮೂಲಕ ಸ್ಯಾನಿಟೈಸರ್ ಮಾಡಲಾಗುತ್ತಿದೆ. ದೇಶದ ಉತ್ತರ ಭಾರತದಲ್ಲಿನ ವಲಸೆ ಕಾರ್ಮಿಕರನ್ನು ಕಂಡಾಗ ಅವರಿಗಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕೆನಿಸುತ್ತಿದೆ. ಆಯುಷ್ಮಾನ್ ಯೋಜನೆಯಡಿ 1 ಕೋಟಿಗೂ ಹೆಚ್ಚು ರೋಗಿಗಳಿಗೆ ಸಹಾಯ ಮಾಡಲಾಗಿದೆ ಎಂದು ಹೇಳಿದರು.
ಹಾಗೆಯೇ ಯೋಗದ ಕುರಿತಾಗಿ ಮಾತನಾಡಿದ ಅವರು, ಯೋಗ ಕೊರೊನಾ ವಿರುದ್ಧದ ಹೋರಾಟಕ್ಕೆ ಸಹಕಾರಿ ಎಂಬ ಮಾತುಗಳು ಕೇಳಿಬರುತ್ತಿದೆ. ಜನರು ಯೋಗ ಮತ್ತು ಆಯುರ್ವೇದದಿಂದ ಮಾನಸಿಕವಾಗಿ ಸದೃಢವಾಗುತ್ತದೆ. ಸೋಂಕಿತರಲ್ಲಿ ಉಸಿರಾಟ ಸಮಸ್ಯೆ ಎದುರಾಗುತ್ತದೆ. ಆದರೆ, ಯೋಗದಿಂದ ಉಸಿರಾಟದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಮ್ಯುನಿಟಿ, ಕಮ್ಯುನಿಟಿ ಮತ್ತು ಯುನಿಟಿಯಿಂದ ವೈರಸ್ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದರು.