ಬೆಂಗಳೂರು, ಮೇ 31 (Daijiworld News/MB) : ಬಹು ಕಾಲದಿಂದ ನೆನೆಗುದಿಗೆ ಬಿದ್ದಿರುವ ತಳವಾರ, ಪರಿವಾರ, ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿದ್ದು ಇದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಧನ್ಯವಾದ ತಿಳಿಸಿರುವ ಅವರು, ಪರಿವಾರ, ತಳವಾರ ಹಾಗೂ ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ, ಈ ಸೌಲಭ್ಯ ಜಾರಿಯಾಗುವಂತೆ ಕ್ರಮ ಕೈಗೊಂಡ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ ಅವರಿಗೆ ಈ ಸಮುದಾಯಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದ್ದಾರೆ.
ಪರಿವಾರ ಹಾಗೂ ತಳವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ನಾವು ಕಂಡ ಕನಸು ಈಡೇರಿದೆ. ಈ ಬಗ್ಗೆ ಮೊದಲಿನಿಂದಲೂ ಕೂಗು ಇತ್ತು. ಇದೀಗ ಕನಸು ನನಸಾಗಿದ್ದು ಇದು ಸಂಭ್ರಮಿಸುವ ಸಮಯ. ಎಲ್ಲಾ ಪ್ರಯತ್ನಗಳು ಫಲ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಳವಾರ, ಪರಿವಾರ, ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತು ಗಜೆಟ್ ಅಧಿಸೂಚನೆ ಜಾರಿಯಾಗಿದ್ದು, ಪರಿಶಿಷ್ಟ ಪಂಗಡಗಳ ಸಂವಿಧಾನ ತಿದ್ದುಪಡಿ ಕಾಯ್ದೆ 2020ರ ರ ಅನ್ವಯ ಪರಿಷ್ಕೃತ ಪಟ್ಟಿಯಲ್ಲಿ ತಳವಾರ ಮತ್ತು ಪರಿವಾರ ಹಾಗೂ ಸಿದ್ಧಿ ಜನಾಂಗವನ್ನು ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದೆ.