ಬೆಳಗಾವಿ, ಮೇ 31 (DaijiworldNews/PY) : ಮಹಾರಾಷ್ಟ್ರದ ಮುಂಬೈ ಮೊದಲಾದ ಕಡೆಗಳಿಂದ ಬಂದಿದ್ದ ವಲಸೆ ಕಾರ್ಮಿಕರನ್ನು ಸರ್ಕಾರಿ ಹಾಸ್ಟೆಲ್, ವಸತಿ ಶಾಲೆಗಳು ಮೊದಲಾದ ಕಡೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಅವರನ್ನು ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ದಿಢೀರನೆ ಬಿಡುಗಡೆ ಮಾಡಿದ್ದಾರೆ. ಇದರಿಂದ ದೊಡ್ಡ ಯಡವಟ್ಟಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆ ಕ್ವಾರಂಟೈನ್ ಕೇಂದ್ರಗಳಲ್ಲಿ ಇದ್ದವರನ್ನು ಪ್ರಯೋಗಾಲಯದಿಂದ ಪರೀಕ್ಷಾ ವರದಿ ಬರುವುದಕ್ಕೆ ಮುನ್ನವೇ ಬಿಡುಗಡೆ ಮಾಡಲಾಗುತ್ತಿದೆ. ಹೀಗೆ ಬಿಡುಗಡೆ ಮಾಡಿದ ಕೆಲವರಿಗೆ ಕೊರೊನಾ ಪಾಸಿಟಿವ್ ಇರುವುದು ನಂತರ ತಿಳಿಯುತ್ತಿದೆ. ಹಾಗಾಗಿ ಅವರನ್ನು ಸಂಪೂರ್ಣ ವರದಿ ಬರುವವರೆಗೂ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿಕೊಳ್ಳಬೇಕು ಎಂದು ತಿಳಿಸಿದರು.
ಅವರನ್ನು ವರದಿ ಬರುವ ತನಕವೂ ಕ್ವಾರಂಟೈನ್ನಲ್ಲಿ ಇರಿಸಿಕೊಂಡರೆ ಯಾವ ತೊಂದರೆಯೂ ಆಗುತ್ತಿರಲಿಲ್ಲ. ನಾನು ಹಾಗೂ ಹಲವರು ಸೇರಿ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಏಕಾಏಕಿ ಸರ್ಕಾರ ಸೂಚನೆ ನೀಡುರುವುದು ಸರಿಯಲ್ಲ ಎಂದರು.
ಯಮಕನಮರಡಿ ಕ್ಷೇತ್ರದಲ್ಲಿರುವ ತಾಲ್ಲೂಕಿನ ಅಗಸಗಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ 600 ಕಾರ್ಮಿಕರನ್ನು ಇರಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. ಆ ಪೈಕಿ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದುಬಂದಿದೆ. ಇವರು ಇನ್ನಷ್ಟು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಅದಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ತಿಳಿಸಿದರು.
7 ದಿನಗಳಿಗಿಂತ ಹೆಚ್ಚು ದಿನಗಳಿಂದ ಕ್ವಾರಂಟೈನ್ ಕೇಂದ್ರಗಳಲ್ಲಿಇರುವವರು ಹಾಗೂ ಯಾವುದೇ ಸೋಂಕಿನ ಲಕ್ಷಣ ಇಲ್ಲದವರನ್ನು ಬಿಡುಗಡೆ ಮಾಡಬೇಕು. ಅವರಿಗೆ ಹೋಂಕ್ವಾರಂಟೈನ್ಗೆ ಸೂಚನೆ ನೀಡಬೇಕು. ಗಂಟಲು ದ್ರವದ ಮಾದರಿ ಸಂಗ್ರಹ ಮಾಡಿದವರನ್ನು ಕೂಡಾ ಬಿಡುಗಡೆ ಮಾಡಬಹುದು ಎಂಬ ಆದೇಶ ಬಂದಿದೆ. ಆ ಪ್ರಕಾರದಂತೆ ಬಿಡುಗಡೆ ಮಾಡಲಾಗಿದೆ. ಈ ಆದೇಶ ನಮಗಷ್ಟೆ ಅಲ್ಲ ಇಡೀ ರಾಜ್ಯಕ್ಕೆ ಅನ್ವಯಿಸುವಂಥದ್ದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಹೇಳಿದರು.
ಈ ಆದೇಶದಿಂದ ಬಿಡುಗಡೆ ಮಾಡಿದವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.