ಹೊಸಪೇಟೆ, ಮೇ 31 (DaijiworldNews/PY) : ಆರ್ಥಿಕ ಪರಿಸ್ಥಿತಿ ಸರಿಯಿಲ್ಲ ಎನ್ನುವುದನ್ನೇ ನೆಪ ಮಾಡಿಕೊಂಡು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಈ ವೇಳೆ ಯಾರೂ ಟೀಕೆ ಮಾಡಬಾರದು. ಬೇರೆ ಪಕ್ಷದ ಸರ್ಕಾರವಿದ್ದರೂ ಈಗಿನ ಪರಿಸ್ಥಿತಿ ಬದಲಿಸಲು ಆಗುತ್ತಿರಲಿಲ್ಲ ಎಂದು ಅರಣ್ಯ ಖಾತೆ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ನಡೆದ ಹುಡಾ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಆತ್ಮವಿಶ್ವಾಸ ಎಲ್ಲೋ ಕಡಿಮೆಯಾಗಿದೆ. ನನ್ನ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಪಟ್ಟಂತೆ ನಾನು ಕಂಡಿರುವ ಕನಸು, ಯೋಜನೆಗಳನ್ನು ಬಹಳ ವೇಗವಾಗಿ ಮಾಡಲು ಯೋಚನೆ ಮಾಡಿದ್ದೆ. ಆದರೆ, ಕೊರೊನಾದಿಂದ ಸರ್ಕಾರದ ಆರ್ಥಿಕತೆ ಪರಿಸ್ಥಿತಿ ಸರಿಯಿಲ್ಲ ಎಂದರು.
ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಹಣವಿರಲ್ಲ. ಅಭಿವೃದ್ದಿಗಂತೂ ಹೆಚ್ಚಿನ ಹಣವಿರಲ್ಲ. ಪ್ರತಿಯೊಂದು ಕೆಲಸವನ್ನು ಜಿಲ್ಲಾಡಳಿತದ ಅಡಿಯಲ್ಲಿ ಮಾಡಬೇಕು. ಅಶೋಕ ಜೀರೆಯವರಿಗೆ ಇದು ಸವಾಲು ಎಂದು ಹೇಳಿದರು.
ಅಶೋಕ ಜೀರೆಯವರು ಬಿಜೆಪಿ ಪಕ್ಷಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಅವರು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕಾಗಿ ನನಗಾಗಲಿ, ಪಕ್ಷದ ಮುಖಂಡರಿಗಾಗಲಿ ಕೇಳಿರಲಿಲ್ಲ. ಅವರು ಮಾಡುವ ಕೆಲಸಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.
ಆರ್ಥಿಕ ಸ್ಥಿತಿ ಕೆಟ್ಟಿರುವ ಕಾರಣ ಕೆಲಸಗಳು ಆಮೆಗತಿಯಲ್ಲಿ ನಡೆಯಬಹುದು. ಆದರೆ, 2-3 ತಿಂಗಳೊಳಗೆ ಜೋಳದ ರಾಶಿ ಗುಡ್ಡದ ಮೇಲೆ 12.5 ಕೋಟಿಯಲ್ಲಿ ವಿವೇಕಾನಂದರ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು. ಖನಿಜ ನಿಧಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ದೇಣಿಗೆ ಪಡೆಯಲಾಗುವುದು ಎಂದರು.