ಬೆಂಗಳೂರು, ಮೇ 31 (Daijiworld News/MB) : ಕೊರೊನಾ ನೆಪ ಹೇಳಿ ಚುನಾವಣೆ ಮುಂದೂಡಿಕೆ ಮಾಡಿದ್ರೆ ಕೋರ್ಟ್ ಮೆಟ್ಟಿಲೇರುವೆ ಎಂದು ಕಾಂಗ್ರೆಸ್ ನಾಯಕ ಹೆಚ್ ಕೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಚುನಾವಣಾ ಆಯೋಗ ಚುನಾವಣೆ ಮುಂದೂಡಿಕೆ ಮಾಡುವುದನ್ನು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಈ ಕುರಿತಾಗಿ ಮಾತನಾಡಿ, ಚುನಾವಣೆ ನಡೆಸದೆಯೇ ನಾಮನಿರ್ದೇಶನ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸಂವಿಧಾನದಲ್ಲಿ ಹಾಗೂ ಪಂಚಾಯತ್ ರಾಜ್ ಅಧಿನಿಯಮದಲ್ಲೂ ಅವಕಾಶವಿಲ್ಲ. ಹೀಗಿರುವಾಗಲೂ ಚುನಾವಣೆ ಮುಂದೂಡಲಾಗಿದೆ, ಇದು ಕಾನೂನು ಬಾಹಿರ, ಕಾಂಗ್ರೆಸ್ ಈ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಲಿದೆ ಎಂದು ಕಿಡಿಕಾರಿದರು.
ಕೊರೊನಾ ನೆಪ ಹೇಳಿ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಮಾಡುವುದು ಸರಿಯಲ್ಲ. ಜನಜೀವನ, ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳಿದೆ. ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ, ಹೀಗಿರುವಾಗ ಮತ್ತೆ ಚುನಾವಣೆ ಮುಂದೂಡುವುದು ಸರಿಯಲ್ಲ ಎಂದು ಹೇಳಿದರು.
ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರವಧಿಯು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತಿದ್ದು ಕಾನೂನು ಪ್ರಕಾರವಾಗಿ ಅಧಿಕಾರವಧಿ ಮುಗಿಯುವ ಮೊದಲೇ ಚುನಾವಣೆಯಾಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ನಿಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.