ಮೈಸೂರು, ಮೇ 31 (Daijiworld News/MB) : ಕೆಲವರಿಗೆ ಸಣ್ಣಪುಟ್ಟ ಅಪೇಕ್ಷೆಗಳು ಇರುತ್ತದೆ. ಅವರು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯೊಂದಿಗೆ ಮಾತನಾಡಬೇಕು. ಅದನ್ನು ಬಿಟ್ಟು ಸಭೆ ನಡೆಸಿದ್ದು ಸರಿಯಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಮ್ಮದೇ ಪಕ್ಷದ ಕೆಲವು ಶಾಸಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವು ಶಾಸಕರಿಗೆ ಸಣ್ಣ ಪುಟ್ಟ ಅಪೇಕ್ಷೆಗಳು ಇರುತ್ತದೆ. ಆದರೆ ಅದನ್ನು ಕೇಳುವ ರೀತಿ ಸರಿಯಿಲ್ಲ. ಅವರು ಮುಖ್ಯಮಂತ್ರಿಗೆ ಬೇಡಿಕೆ ತಿಳಿಸದೆಯೇ ಶಾಸಕರ ಸಭೆ ನಡೆಸಿದ್ದು ಸರಿಯಲ್ಲ ಎಂದು ನಾನೂ ಕೂಡಾ ಒಪ್ಪಿಕೊಳ್ಳುತ್ತೇನೆ. ಪಕ್ಷದ ವರಿಷ್ಠರು ಈ ಬಗ್ಗೆ ಮಾತನಾಡಿ ಎಲ್ಲವನ್ನೂ ಸರಿಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲೇ ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆಂತರಿಕ ಕಚ್ಚಾಟಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ. ಆ ಲಕ್ಲಕ್ಷ್ಮಣ ರೇಖೆ ದಾಟುವವರು ನಮ್ಮ ಪಕ್ಷದಲ್ಲೂ ಯಾರಿಲ್ಲ. ಬೇರೆ ಪಕ್ಷದಲ್ಲಿ ಇರಬಹುದು. ನಮ್ಮ ಸರ್ಕಾರವಂತೂ ಸುಭದ್ರವಾಗಿದೆ. ಆಂತರಿಕ ಕಚ್ಚಾಟವೆಂದರೆ ಏನು ಹಾಗೂ ಅದರಿಂದಾಗಿ ಯಾವ ಸರ್ಕಾರಕ್ಕೆ ತೊಂದರೆ ಉಂಟಾಗಿದೆ ಎಂದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.