ನವದೆಹಲಿ, ಮೇ 31 (DaijiworldNews/PY) : ಹಿಂದೂಮಹಾಸಾಗರದಿಂದ ಸಂಪರ್ಕ ಹೊಂದಿರುವವರು, ಭಾರತೀಯ ಸಮೋಸದಿಂದ ಒಗ್ಗೂಡಿದ್ದೇವೆ. ಕೊರೊನಾ ವಿರುದ್ಧ ನಾವು ವಿಜಯ ಸಾಧಿಸಿದ ಬಳಿಕ ಜೊತೆಯಾಗಿ ಕುಳಿತು ಸಮೋಸ ಸವಿಯೋಣ ಎಂದು ಆಸ್ಟ್ರೇಲಿಯಾ ಪ್ರಧಾನಿ ಅವರ ಟ್ವೀಟ್ಗೆ ಪ್ರಧಾನಿ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಮಾವಿನ ಚಟ್ನಿ ಜೊತೆ ಭಾನುವಾರದ ಸ್ಕೊಮೋಸಗಳು, ಎಲ್ಲವನ್ನು ನಾನೇ ಮಾಡಿದ್ದು.ಪ್ರಧಾನಿ ಮೋದಿ ಅವರೊಂದಿಗೆ ಈ ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದೇವೆ. ಅವರು ಸಸ್ಯಾಹಾರಿ. ಅವರೊಂದಿಗೆ ಇದನ್ನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, ಹಿಂದೂ ಮಹಾಸಾಗರದಿಂದ ಸಂಪರ್ಕ ಹೊಂದಿದವರು, ಭಾರತೀಯ ಸಮೋಸದಿಂದ ಒಗ್ಗೂಡಿದ್ದೇವೆ. ಸ್ಕಾಟ್ ಮಾರಿಸನ್ ತಯಾರಿಸಿರುವ ಈ ಸಮೋಸ ನೋಡಲು ರುಚಿಕರವಾಗಿ ಕಾಣುತ್ತಿದೆ. ಕೊರೊನಾ ವಿರುದ್ದದ ಹೋರಾಟದಲ್ಲಿ ನಾವು ಜಯ ಸಾಧಿಸಿದ ನಂತರ ಜೊತೆಯಾಗಿ ಕುಳಿತ ಸಮೋಸ ಸವಿಯೋಣ. 4ರಂದು ನಡೆಯಲಿರುವ ನಮ್ಮ ಮಾತುಕತೆಯನ್ನುಯ ಎದುರುನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಭಾರತಕ್ಕೆ ಮಾರಿಸನ್ ಅವರು ಜನವರಿಯಲ್ಲಿ ಭೇಟಿ ನೀಡಬೇಕಾಗಿತ್ತು. ಆದರೆ, ಆ ಸಂದರ್ಭ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಉಂಟಾದ ಕಾರಣ ಭೇಟಿಯನ್ನು ಮುಂದೂಡಲಾಗಿತ್ತು. ಬಳಿಕ ಮೇ ತಿಂಗಳಲ್ಲಿ ಭಾರತ ಪ್ರವಾಸ ನಿಗದಿಯಾಗಿತ್ತು. ಆದರೆ, ಕೊರೊನಾ ವೈರಸ್ ಇರುವ ಕಾರಣ ಪುನಃ ಭೇಟಿ ರದ್ದಾಗಿತ್ತು. ಆ ಕಾರಣದಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತುಕತೆ ನಡೆಸಲು ತೀರ್ಮಾನ ಮಾಡಲಾಗಿದೆ. ಜೂನ್ 4ರಂದು ಮಾತುಕತೆ ನಡೆಯುವ ನಿರೀಕ್ಷೆ ಇದೆ.