ಬೆಂಗಳೂರು, ಮೇ 31 (DaijiworldNews/PY) : ದೇಶಾದ್ಯಂತ ಲಾಕ್ಡೌನ್ 5.0 ಜಾರಿಯಲ್ಲಿರುವ ನಿಟ್ಟಿನಲ್ಲಿ ಜೂನ್ 1ರಿಂದ ತೆರೆಯಲು ಉದ್ದೇಶಿಸಿರುವ ದೇವಸ್ಥಾನ, ಮಸೀದಿ ಹಾಗೂ ಚರ್ಚ್ಗಳನ್ನು ತೆರೆಯಲು ಅವಕಾಶ ನೀಡದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಕೇಂದ್ರದ ಮಾರ್ಗಸೂಚಿಯಂತೆ ಜೂನ್ 8 ದೇವಸ್ಥಾನ, ಚರ್ಚ್, ಮಸೀದಿ, ಹೊಟೇಲ್, ಮಾಲ್ಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ.
ನಾಳೆಯಿಂದ ರಾಜ್ಯದ ದೇವಸ್ಥಾನಗಳ ತೆರೆಯಲಿದೆ. ಆದರೆ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿಲ್ಲ. ಕೇವಲ ಅರ್ಚಕರು ಮಾತ್ರವೇ ಗರ್ಭಗುಡಿಗೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದಾಗಿದೆ. ಇನ್ನು ದೇವಸ್ಥಾನ ಆರಂಭವಾದ ಬಳಿಕ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಲ್ಲದೇ, ಮುಖಕ್ಕೆ ಮಾಸ್ಕ್ ಧರಿಸಿಯೇ ದೇವರ ದರ್ಶನ ಪಡೆಯಬೇಕು. ದೇವರ ವಿಗ್ರಹಗಳನ್ನು ಮುಟ್ಟಿ ದರ್ಶನ ಪಡೆಯುವುದಕ್ಕೆ ನಿರ್ಬಂಧ ಹೇರಲಾಗಿದೆ.
ರಾಜ್ಯದಲ್ಲಿಯೂ ರಾತ್ರಿ ಕರ್ಪ್ಯೂ ಅವಧಿಯನ್ನು ಕಡಿತಗೊಳಿಸಿದ್ದು, ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಮಾತ್ರವೇ ರಾತ್ರಿ ಕರ್ಪ್ಯೂ ಆಚರಿಸಲು ನಿರ್ಧಾರ ಕೈಗೊಂಡಿದೆ. ಮದುವೆ ಹಾಗೂ ಅಂತ್ಯಕ್ರಿಯೆ ನಡೆಸುವುದಕ್ಕೆ ಷರತ್ತುಬದ್ದವಾದ ಅನುಮತಿ ಕಲ್ಪಿಸಲಾಗಿದೆ. ಮದುವೆ ಸಮಾರಂಭಗಳಿದ್ದಲ್ಲಿ ಈ ಹಿಂದೆ ಇದ್ದಷ್ಟೇ 50 ಮಂದಿಯಷ್ಟೇ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆ ನಡೆಸುವುದಕ್ಕೂ ಕೇವಲ 20 ಜನರಿಗಷ್ಟೇ ಅವಕಾಶ ನೀಡಲಾಗಿದೆ. ಆದರೆ, ಕಂಟೈನ್ಮೆಂಟ್ ಝೋನ್ಗಳಲ್ಲಿ ಯಾವುದೇ ರೀತಿಯಾದ ಸಡಿಲಿಕೆಯನ್ನು ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಲಾಕ್ಡೌನ್ ಸಡಿಲಿಕೆ ಮಾಡಿದ್ದರೂ ಶಾಲಾ, ಕಾಲೇಜು, ಟ್ಯೂಷನ್ ಸೆಂಟರ್ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳನ್ನು ಸದ್ಯಕ್ಕೆ ತೆರೆಯದಿರಲು ನಿರ್ಧರಿಸಿದ್ದು, ಶಾಲೆಗಳನ್ನು ಆಗಸ್ಟ್ ನಂತರವೇ ತೆರಯುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸಿನಿಮಾ ಥಿಯೇಟರ್, ಕ್ರೀಡೆ, ಅಂತರಾಷ್ಟ್ರೀಯ ವಿಮಾನ ಸೇವೆ, ಜಿಮ್, ಆಡಿಟೋರಿಯಂ ಪಾರ್ಕ್, ಸ್ವಿಮ್ಮಿಂಗ್ ಪೂಲ್, ಮೆಟ್ರೋ ಸಂಚಾರ, ಮನೋರಂಜನಾ ಪಾರ್ಕ್, ಸಾಂಸ್ಕೃತಿಕ, ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.
ಇನ್ನು ರಾಜ್ಯದಲ್ಲಿ ಕೈಗಾರಿಕೆ ಹಾಗೂ ಕಂಪೆನಿಗಳನ್ನು ಸಂಪೂರ್ಣವಾಗಿ ತೆರೆಯಲು ಅವಕಾಶ ನೀಡಿರುವ ರಾಜ್ಯ ಸರ್ಕಾರ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಹಾಗೂ ಕಡ್ಡಾಯವಾಗಿ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ. ಅಲ್ಲದೇ, ಕಂಪೆನಿಗಳಿಗೆ ವರ್ಕ್ ಫ್ರಂ ಹೋಂ ನಡೆಸಲೂ ಸೂಚಿಸಿದೆ.