ಬೆಂಗಳೂರು, ಜೂ. 01 (Daijiworld News/MB) : ರಾಜ್ಯದಾದ್ಯಂತ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ಗಳಿಗೆ ಪರ್ಯಾಯವಾಗಿ ಕರ್ತವ್ಯ ನಿರ್ವಹಿಸುತ್ತಿರುವ 9,000ಕ್ಕೂ ಹೆಚ್ಚು ಗೃಹರಕ್ಷಕ ಸಿಬ್ಬಂದಿಯನ್ನು ಕೈಬಿಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ.
ಈ ಕುರಿತು ಎಡಿಜಿಪಿ (ಆಡಳಿತ) ಎಂ.ಎ. ಸಲೀಂ ಎಲ್ಲಾ ಘಟಕಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಈ ತೀರ್ಮಾನವು ಜೂನ್ ಒಂದರಿಂದಲ್ಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಇನ್ನು ರಾಜ್ಯದಲ್ಲಿ ಸದ್ಯ ಸುಮಾರು 25 ಸಾವಿರ ಗೃಹರಕ್ಷಕರಿದ್ದು ಈ ಸುತ್ತೋಲೆ ಅನ್ವಯ ಎಡಿಜಿಪಿ ಕಚೇರಿಗಳು, ಕಮಿಷನರೇಟ್ಗಳು ಮತ್ತು ಎಲ್ಲ ವಲಯಗಳಿಗೆ ಸೇರಿ ಒಟ್ಟು 3,695 ಗೃಹರಕ್ಷಕ ಸಿಬ್ಬಂದಿಯನ್ನು ಮಾತ್ರ ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಾಜ್ಯದಲ್ಲಿರುವ ಸುಮಾರು 25 ಸಾವಿರ ಗೃಹರಕ್ಷಕರ ಪೈಕಿ ಪೊಲೀಸ್ ಇಲಾಖೆಯೊಂದರಲ್ಲೇ 12 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಕೊರೊನಾ ವೈರಸ್ ವಾರಿಯರ್ಸ್ಗಳಾಗಿ ಕಾನ್ಸ್ಟೆಬಲ್ಗಳಂತೆ ಈ ಗೃಹರಕ್ಷಕರೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಪಡಿಸಿರುವ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಸರ್ಕಾರವು ಗೃಹರಕ್ಷಕ ಸಿಬ್ಬಂದಿಗೆ ದಿನ ಭತ್ಯೆಯಾಗಿ ₹380, ಬೆಂಗಳೂರಿನಲ್ಲಿ ₹455 ನಿಗದಿ ಪಡಿಸಿದ್ದು 2019ರ ಸೆ. 7ರಂದು ರಾಜ್ಯಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕ ಸಿಬ್ಬಂದಿಗೆ ಮಾತ್ರ ಭತ್ಯೆಯನ್ನು ₹750ಕ್ಕೆ ಏರಿಸಿ ಆದೇಶ ಹೊರಡಿಸಿತ್ತು. ಆದರೆ ಅದೇ ಈ ಸಿಬ್ಬಂದಿಗಳಿಗೆ ಈಗ ಮುಳುವಾಗಿ ಪರಿಣಮಿಸಿರಬಹುದು ಎಂದು ಹೇಳಿದ್ದಾರೆ.
ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಇಲಾಖೆಯ ಹೆಚ್ಚುವರಿಪೊಲೀಸ್ ಮಹಾನಿರ್ದೇಶಕ ಸುನೀಲ್ ಅಗರವಾಲ್ ಅವರು, ಆಯಾ ಘಟಕಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಮಗೂ ಮಾಹಿತಿ ಇದೆ. ಖಾಲಿ ಇರುವ ಕಾನ್ಸ್ಟೆಬಲ್ ಹುದ್ದೆಗಳಿಗೆ ವಿರುದ್ಧವಾಗಿ ಗೃಹರಕ್ಷಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುತ್ತದೆ. ಅನೇಕ ಮಂದಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾನ್ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಆಗಿದೆ. ಹೀಗಾಗಿ, ಪೊಲೀಸ್ ಮಹಾನಿರ್ದೇಶಕರ ಮಟ್ಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.