ಬೆಂಗಳೂರು, ಜೂ. 01 (Daijiworld News/MB) : ಕೊರೊನಾ ಸೋಂಕು ದೃಢಪಟ್ಟ ಬಳಿಕ ಆಸ್ಪತ್ರೆಯಲ್ಲಿರುವ ಪಾದರಾಯನಪುರ ಬಿಬಿಎಂಪಿ ಕಾರ್ಪೋರೇಟರ್ ಇಮ್ರಾನ್ ಪಾಷಾ ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಭಾನುವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಅವರು, ಮಾಧ್ಯಮದಲ್ಲಿ ಬಿತ್ತರವಾಗುತ್ತಿರುವ ವರದಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಕೊರೊನಾ ಸೋಂಕು ಇದ್ದರೂ ಕೂಡಾ ಇಮ್ರಾನ್ ಪಾಷಾ ಆಸ್ಪತ್ರೆಗೆ ತೆರಳಲು ವಿಳಂಬ ಮಾಡಿದರು ಎಂದು ಮಾಧ್ಯಮಗಳು ವರದಿ ಮಾಡುತ್ತಿದೆ. ಓರ್ವ ಜನಪ್ರತಿನಿಧಿಯಾಗಿ, ನಾಲ್ಕು ಜನರಿಗೆ ಬುದ್ಧಿ ಹೇಳುವ ನಾನು ಆ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದು ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ದೂರಿದ್ದಾರೆ.
ಕೊರೊನಾ ಪಾಸಿಟಿವ್ ಬಂದ ಬಳಿಕ ಇಮ್ರಾನ್ ಪಾಷಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬಂದಾಗ ಅವರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆಯೇ ಜನರ ನಡುವೆ ನಡೆದಿದ್ದರು ಹಾಗೂ ನೂರಾರು ಜನರು ಈ ಸಂದರ್ಭದಲ್ಲಿ ಸೇರಿದ್ದರು ಎಂದು ಮಾಧ್ಯಮಗಳು ಪ್ರಸಾರ ಮಾಡಿದ್ದು ಆ ಬಳಿಕ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹಾಗೂ ಅವರ ಬೆಂಬಲಿಗರ ವಿರುದ್ಧ ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲು ಮಾಡಲಾಗಿದೆ.