ಕೊಚ್ಚಿ, ಜೂ. 01 (Daijiworld News/MB) : ಪೋಷಕರನ್ನು ಮನೆಯಿಂದ ಹೊರಹಾಕುವಂತೆ ಅಥವಾ ಕುಟುಂಬದಿಂದ ದೂರ ಇಡುವಂತೆ ಪೀಡಿಸುವುದು ತಪ್ಪು, ಹಾಗಾಗಿ ಈ ಕಾರಣದಿಂದಾಗಿ ಪತಿ ಪತ್ನಿಗೆ ವಿಚ್ಛೇದನ ನೀಡಬಹುದು ಎಂದು ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಎಂ. ಶಫೀಕ್ ಮತ್ತು ಮೇರಿ ಜೋಸೆಫ್ ಅವರು ಮಹತ್ವದ ಆದೇಶ ನೀಡಿದ್ದಾರೆ.
ಕಣ್ಣೂರು ಜಿಲ್ಲೆಯ ತಲಶೇರಿಯ 41 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯು ತನ್ನ ಪೋಷಕರನ್ನು ಮನೆಯಿಂದ ಹೊರ ಹಾಕಿ ಅಥವಾ ನಮಗೆ ಬೇರೆ ಮನೆ ಮಾಡಿ ಎಂದು ಕಿರುಕುಳ ನೀಡುತ್ತಿದ್ದಾಳೆ. ಆದ್ದರಿಂದ ಆಕೆಯಿಂದ ನನಗೆ ವಿಚ್ಛೇದನ ಬೇಕು ಎಂದು ಹೈಕೋರ್ಟ್ ಮೊರೆಹೋಗಿದ್ದು ಕೇರಳ ಹೈಕೋರ್ಟ್ 2016ರ ಸುಪ್ರೀಂ ಕೋರ್ಟ್ ಆದೇಶವನ್ನು ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಉಲ್ಲೇಖ ಮಾಡಿ, ಪತಿಯ ಪೋಷಕರನ್ನು ಮನೆಯಿಂದ ಹೊರಹಾಕಲು ಹೇಳುವ ಅಥವಾ ಪ್ರತ್ಯೇಕ ಮನೆ ಮಾಡುವಂತೆ ಪತಿಯನ್ನು ಒತ್ತಾಯ ಮಾಡಿದ್ದಲ್ಲಿ ಪತ್ನಿಗೆ ಪತಿ ವಿಚ್ಛೇದನ ನೀಡಬಹುದು ಎಂದು ತಿಳಿಸಿ ಈ ಹಿಂದೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಸಿಂಧುಗೊಳಿಸಿದೆ.
2003ರಲ್ಲಿ ಮದುವೆಯಾಗಿದ್ದ ಜೋಡಿಗೆ ಒಬ್ಬ ಮಗಳಿದ್ದು ಈ ವ್ಯಕ್ತಿ 2014ರಲ್ಲೇ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ವಜಾ ಮಾಡಿತ್ತು. ಆದ್ದರಿಂದ ಅರ್ಜಿ ವಜಾಗೊಳಿಸದನ್ನು ಪ್ರಶ್ನಿಸಿ ಈ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರು, ಹಿಂದೂ ಸಮಾಜದಲ್ಲಿ ಪೋಷಕರನ್ನ ನೋಡಿಕೊಳ್ಳುವುದು ಮಗನ ಕರ್ತವ್ಯ. ಎಲ್ಲಾ ಕುಟುಂಬದಲ್ಲಿ ಜಗಳ ಸಾಮಾನ್ಯ, ಹಿರಿಯರು ಬೈಯುವುದು ಸಾಮಾನ್ಯ. ಮನೆಯ ಕೆಲಸವನ್ನು ಮಾಡುವಂತೆ ಅತ್ತೆ ಸೊಸೆಗೆ ಹೇಳುವುದು ಕೂಡಾ ಅಪರೂಪದ ವಿಷಯವೇನಲ್ಲ. ಆದರೆ ಇದೇ ಕಾರಣಕ್ಕೆ ಅತ್ತೆಯನ್ನು ಮನೆಯಿಂದ ಹೊರ ಹಾಕುವಂತೆ ಪತಿಯ ಮೇಲೆ ಒತ್ತಡ ಹೇರುವುದು ಕ್ರೌರ್ಯ ಎಂದು ಹೇಳಿದ್ದಾರೆ.