ನವದೆಹಲಿ, ಜೂ 01 (DaijiworldNews/PY) : ಕೊರೊನಾ ಪ್ರಕರಣಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಭಾರತ ಜಾಗತೀಕ ಮಟ್ಟದಲ್ಲೂ ಟಾಪ್ 10 ಪಟ್ಟಿಯಲ್ಲಿ ಮೇಲೆರುತ್ತಿದೆ. ನಿನ್ನೆ 8ನೇ ಸ್ಥಾನದಲ್ಲಿದ್ದ ಭಾರತ ಇಂದು ಏಳನೇ ಸ್ಥಾನಕ್ಕೇರಿದೆ. ವಿಶ್ವ ಆರೋಗ್ಯ ಸಂಸ್ಥೆಯ ಕೊರೊನಾ ವೈರಸ್ ಟ್ರ್ಯಾಕರ್ನ ಪ್ರಕಾರ ಭಾರತದಲ್ಲಿ 1,82,143 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಭಾನುವಾರ ರಾತ್ರಿ 10.30ರ ಡೇಟಾ ಪ್ರಕಾರ ಜಾಗತಿಕವಾಗಿ ಒಟ್ಟು 59,34,936 ಕೊರೊನಾ ಪ್ರಕರಣ ದಾಖಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಕೊರೊನಾ ಟ್ರ್ಯಾಕರ್ ಪ್ರಕಾರ ಭಾರತ ಅತಿಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಏರಿದೆ. ಆರಂಭದ ಸ್ಥಾನಗಳಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ, ಬ್ರಿಟನ್, ಸ್ಪೇನ್, ಇಟಲಿ ಇವೆ. ಅಮೆರಿಕದಲ್ಲಿ ಒಟ್ಟು 17,16,078 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜರ್ಮನಿಯಲ್ಲಿ 1,81,482, ಟರ್ಕಿಯಲ್ಲಿ 1,63,103, ಇರಾನ್ನಲ್ಲಿ 1,48,950 ಪ್ರಕರಣಗಳು ದಾಖಲಾಗಿವೆ.
ಈವರೆಗೆ ಭಾರತದಲ್ಲಿ ಗರಿಷ್ಟ ಏರಿಕೆಯಾಗಿದ್ದು, ಭಾನುವಾರ 8,380 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,82,143ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,164 ಆಗಿದೆ. 89,995 ಸಕ್ರಿಯ ಪ್ರಕರಣಗಳಿದ್ದು, 86,983 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ರಿಕವರಿ ಡೇಟಾ ಶೇ. 47.76 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಡೇಟಾ ಹೇಳುತ್ತಿದೆ.