ಬೆಂಗಳೂರು, ಜೂ 01 (Daijiworld News/MSP): ಕೇಂದ್ರ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಲಾಕ್ ಡೌನ್ ಘೋಷಿಸಿ 560ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಕೇಂದ್ರದ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿದ್ದರೆ ಲಾಕ್ ಡೌನ್ ಘೋಷಿಸುವ ಮೊದಲೇ ಅವರವ ಸ್ಥಳಗಳಿಗೆ ತಲುಪಿಸಬಹುದಿತ್ತುಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಕೊಂಚ ಮುನ್ನೆಚ್ಚರಿಕೆ ವಹಿಸುತ್ತಿದ್ದರೆ, ಬೀದಿಯಲ್ಲಿ ಸಾವು, ರಸ್ತೆಯಲ್ಲಿ ಹೆರಿಗೆಯಾಗುವುದನ್ನು, ರೈಲ್ವೆ ಹಳಿಗಳ ಮೇಲೆ ಮಲಗಿ ಸಾಯುವುದನ್ನು , ಅನ್ನ ಮತ್ತು ನೀರಿಲ್ಲದೇ ಜನರು ಪ್ರಾಣ ಬಿಡುತ್ತಿರುವುದನ್ನು ನಾವು ನೋಡುತ್ತಿರಲಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬರೀ ಪ್ರಚಾರ ಗಿಟ್ಟಿಸಿಕೊಳ್ಳುವುದಷ್ಟೇ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕೇವಲ ಸುಂದರವಾಗಿ ಮಾತನಾಡಲು ಸಿದ್ದವಿದೆ. ಆದರೆ ನಿಜಕ್ಕೂ ಕೆಲಸ ಮಾಡುವ ಹುಮ್ಮಸ್ಸೇ ಇಲ್ಲ.ಕೋವಿಡ್- 19 ವಿಚಾರವಾಗಿ ಮಾತನಾಡಬಾರದು ಎಂದುಕೊಂಡಿದ್ದೆ. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಮಾತನಾಡಬೇಕಾಯಿತು. ಇಷ್ಟು ದಿನ ಜನರಿಗಾಗಿ ನಾವು ಮೌನವಾಗಿದ್ದೆವು ಆದರೆ ಸರ್ಕಾರವೇ ಜನರ ಬಗ್ಗೆ ಕಾಳಜಿ ವಹಿಸದಾಗ ವೈಫಲ್ಯಗಳನ್ನ ಜನರ ಗಮನಕ್ಕೆ ತರುವುದು ಅನಿವಾರ್ಯವಾಗಿದೆ.
ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರೂ ತೊಂದರೆ ಸಿಲುಕಿದ್ದಾರೆ. ಸರ್ಕಾರ ಮನ್ಸಸ್ಸು ಮಾಡಿದ್ರೆ ಲಾಕ್ ಡೌನ್ ಗೂ ಮುನ್ನ ಪ್ಯಾಸೆಂಜರ್ ಟ್ರೈನ್ ನಲ್ಲಿ ನಾಲ್ಕು ದಿನದಲ್ಲಿ ಎಲ್ಲಾ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಕಳುಹಿಸಿಕೊಡಬಹುದಿತ್ತು. ಕೂಲಿ ಕಾರ್ಮಿಕರನ್ನು ಕಳುಹಿಸಿ ಕೊಡುವ ವಿಚಾರದಲ್ಲಿ ಕೇಂದ್ರ ರೈಲ್ವೆ ಇಲಾಖೆ ವಿಫಲವಾಗಿದ್ದಲ್ಲದೆ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ. ಹೀಗಾಗಿ ಕೇಂದ್ರ ರೈಲ್ವೆ ಸಚಿವ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.