ನವದೆಹಲಿ, ಜೂ. 01 (Daijiworld News/MB) : ದೆಹಲಿಯಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು ಎಲ್ಲಾ ಅಂಗಡಿ, ಸೆಲೂನ್ಗಳನ್ನು ತೆರೆಯಬಹುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಸೆಲೂನ್ ಹಾಗೂ ಕ್ಷೌರದಂಗಡಿಯನ್ನೂ ತೆರೆಯಲು ಅವಕಾಶ ನೀಡಲಾಗುವುದು. ಆದರೆ ಸ್ಪಾ ತೆರೆಯಲು ಅವಕಾಶವಿಲ್ಲ. ಮಾರುಕಟ್ಟೆಯಲ್ಲಿ ಅಂಗಡಿ ತೆರೆಯಲು ಸಮ-ಬೆಸ ನಿಯಮ ಪಾಲಿಸುತ್ತಿದ್ದೆವು. ಆದರೆ ಕೇಂದ್ರ ಸರ್ಕಾರ ಈ ರೀತಿಯ ಯಾವುದೇ ನಿಯಮ ಪಾಲಿಸುವಂತೆ ಸೂಚನೆ ನೀಡದ ಹಿನ್ನಲೆಯಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಂಟೈನ್ಮೆಂಟ್ ವಲಯದಲ್ಲಿ ಜೂನ್ 30ರವರೆಗೆ ಲಾಕ್ಡೌನ್ ಮುಂದುವರೆಯಲಿದ್ದು ಉಳಿದೆಡೆ ಹಂತಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲು ಶನಿವಾರ ಸರ್ಕಾರ ತೀರ್ಮಾನ ಮಾಡಿತ್ತು.
ಈವರೆಗೆ ಆಟೊ, ಇ-ರಿಕ್ಷಾ ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಗದಿ ಮಾಡಲಾಗಿದ್ದು ಇದೀಗ ಪ್ರಯಾಣಿಕರ ಸಂಖ್ಯೆಗೆ ಇರುವ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಹಾಗೆಯೇ ಒಂದು ವಾರಗಳ ಕಾಲ ಎಲ್ಲ ಗಡಿ ಭಾಗಗಳನ್ನು ಮುಚ್ಚಲಿದ್ದು ಅಗತ್ಯ ಸೇವೆಗಳ ವಾಹನಕ್ಕೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.