ಬಳ್ಳಾರಿ, ಜೂ. 01 (Daijiworld News/MB) : ಅಧಿಕಾರ ಪಡೆಯಬೇಕು ಎಂಬ ಆಸೆ ಇರುವುದು ಸಹಜ, ಹಾಗಾಗಿ ರಾಜಕೀಯ ಬದಲಾವಣೆ ಬಗ್ಗೆ ಶಾಸಕರು ಚರ್ಚೆ ಮಾಡಿರಬಹುದು. ಆದರೆ ಅಷ್ಟು ಮಾತ್ರಕ್ಕೆ ಅದು ಬಿನ್ನಮತವಾಗಲ್ಲ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಮಣ ಸವದಿ ಹೇಳಿದ್ದಾರೆ.
ಈ ಕುರಿತಾಗಿ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಅವರು ಹೇಳಿಕೊಂಡಿದ್ದಾರೆ. ಅವರದ್ದು ಸಹೋದರ ರಮೇಶ್ ಕತ್ತಿಯನ್ನು ರಾಜ್ಯಸಭೆಗೆ ಕಳುಹಿಸಬೇಕೆಂಬುದು ಬೇಡಿಕೆಯಾಗಿದ್ದು ಅದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳಿದರು.
ಲಾಕ್ಡೌನ್ ಕಾರಣದಿಂದಾಗಿ ಎಲ್ಲಾ ಹೊಟೇಲ್ಗಳು ಬಂದ್ ಆಗಿದ್ದಾಗ ಎಲ್ಲೂ ಊಟ ಸಿಗುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಸೇರಿ ಮುರುಗೇಶ್ ನಿರಾಣಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ, ಇದು ನಿಜ. ಶಾಸಕರು ನಮ್ಮ ಊರಿಗೆ ಬಂದಾಗ ನಾನೂ ಕೂಡಾ ಊಟದ ವ್ಯವಸ್ಥೆ ಮಾಡಿದ್ದೇನೆ. ಭೋಜನ ಕೂಟ ಮಾಡಿದ್ದೆವು. ಅಷ್ಟಕ್ಕೆ ಅದು ಭಿನ್ನಮತವಾಗಿ ಬಿಡಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ನಾಯಕರು ಎಂದು ತಿಳಿಸಿದರು.
ನಾವೆಲ್ಲರೂ ಪಕ್ಷದ ಚೌಕಟ್ಟಿನಲ್ಲೆ ಕೆಲಸ ಮಾಡಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಬೇಕು. ಎಲ್ಲವನ್ನೂ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸಿ ಮಾತುಕತೆಯ ಮೂಲಕ ಸರಿಪಡಿಸಲಾಗುತ್ತದೆ ಎಂದರು.