ಬೆಂಗಳೂರು, ಜೂ 01 (DaijiworldNews/PY) : ದೇಶವನ್ನು ಕಟ್ಟುವ ಕಾಯಕಕ್ಕೆ ಪ್ರಧಾನಿ ಮೋದಿ ಅವರು ತನ್ನನ್ನು ತಾನೇ ಸಮರ್ಪಿಸಿಕೊಂಡ ಉಕ್ಕಿನ ಮನುಷ್ಯ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ ಅತ್ಯಂತ ಹಳೆಯ ವ್ಯಾಜ್ಯವಾಗಿದ್ದ ರಾಮ ಮಂದಿರಕ್ಕೆ ಪರಿಹಾರ ಕಂಡುಕೊಳ್ಳಲಾಯಿತು. ತ್ರಿವಳಿ ತಲಾಖ್ ರದ್ದುಪಡಿಸಲಾಯಿತು. ನಾಗರಿಕ ಕಾಯ್ದೆಗೆ ತಿದ್ದುಪಡಿ, ವಂದೇ ಭಾರತ್ ಮಿಷನ್, ಒಂದು ದೇಶ ಒಂದು ಪಡಿತರ ಚೀಟಿ ಹಾಗೂ ಹೊಸ ಮೋಟಾರು ಕಾಯ್ದೆ ಪ್ರಮುಖವಾದುದು ಎಂದು ತಿಳಿಸಿದರು.
ಕಳೆದ 70 ವರ್ಷಗಳಲ್ಲಿ ಯಾವುದೇ ಸರ್ಕಾರ ಮಾಡದಿರುವ ಸಾಧನೆಗಳು ಮಾಡಿದೆ. ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಳಿತ ಪ್ರದೇಶವನ್ನಾಗಿ ಘೋಷಿಸಿದರು. ರೈತರು, ಕಾರ್ಮಿಕರು, ಸಣ್ಣ ಅಂಗಡಿಗಳನ್ನು ನಡೆಸುವವರು ಹಾಗೂ ಅಸಂಘಟಿತ ವಲಯಕ್ಕೆ ಮಾಸಿಕ ಪಿಂಚಣಿ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಜಾರಿಗೆ ತರುವ ಮೂಲಕ ಸಮಾಜದ ಅತ್ಯಂತ ಬಡವರನ್ನು ಸಂಕಷ್ಟದಿಂದ ಮೇಲಕ್ಕೆತ್ತುವ ಕಾರ್ಯವನ್ನು ಮಾಡಿದ್ದಾರೆ ಎಂದರು.
ಮೋದಿಯವರ ಆಡಳಿತದ ಮೇಲೆ ದೇಶದ ಜನತೆ ವಿಶ್ವಾಸವಿಟ್ಟು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 303 ಸ್ಥಾನಗಳನ್ನು ಹಾಗೂ ಎನ್ಡಿಎಗೆ 352 ಸ್ಥಾನಗಳನ್ನು ಗೆಲ್ಲಿಸಿದರು. ಕರ್ನಾಟಕದಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರೂ ಮೋದಿ ಅಲೆಯಲ್ಲಿ ಕೊಚ್ಚಿ ಹೋದರು. ಬಿಜೆಪಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ 25ನ್ನು ಗೆದ್ದುಕೊಂಡಿತು ಎಂದು ತಿಳಿಸಿದರು.