ಚಿಕ್ಕಮಗಳೂರು, ಜೂ. 01 (Daijiworld News/MB) : "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿಗೆ ಬಂದರೂ ಅಚ್ಚರಿಪಡಬೇಕಾಗಿಲ್ಲ, ರಾಜಕೀಯದಲ್ಲಿ ಏನು ಬೇಕಾದರೂ ಆದೀತು" ಎಂದು ಸಚಿವ ಸಿ.ಟಿ.ರವಿ ಅವರು ವ್ಯಂಗ್ಯ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬ ಮಾತಿದೆ. ಹಾಗೆಯೇ ಬಿಜೆಪಿಯನ್ನು ಹೊಗಳಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿ ಇರುವಾಗ ಬಿಜೆಪಿಯನ್ನು ಹೊಗಳಿದರೆ ಅದು ಅವರ ರಾಜಕೀಯ ಅಧಿಕಾರಕ್ಕೆ ತೊಂದರೆ ಉಂಟು ಮಾಡುತ್ತದೆ. ಅವರು ಬಿಜೆಪಿಗೆ ಬಂದರಷ್ಟೇ ಬಿಜೆಪಿಯನ್ನು ಹೊಗಳಲು ಸಾಧ್ಯ. ಅದು ಅವರಿಗೂ ಗೊತ್ತು. ಅವರು ಜನನಾಯಕ, ಅವರು ಬಿಜೆಪಿಯಲ್ಲಿ ಇರಬೇಕು. ಅವರು ಬಿಜೆಪಿಗೆ ಬಂದ ಬಳಿಕ ಖಂಡಿತವಾಗಿ ಬಿಜೆಪಿಯನ್ನು ಹೊಗಳುತ್ತಾರೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
"ಸಿದ್ದರಾಮಯ್ಯ ಅವರು ಬಿ.ಎಸ್. ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಅವರಂತೆಯೇ ಜನನಾಯಕರು, ಅವರು ನಿಜವಾಗಿ ಬಿಜೆಪಿ ಪಕ್ಷದಲ್ಲಿ ಇರಬೇಕಿತ್ತು" ಎಂದು ಹೇಳಿದರು.
''ಇನ್ನು ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಶೀತಲ ಸಮರ ನಡೆಯುತ್ತಿದ್ದು ಅದು ಯಾವ ತಿರುವಿಗೂ ಕಾರಣವಾಗಬಹುದು'' ಎಂದು ಹೇಳಿದರು.