ಬೆಂಗಳೂರು, ಜೂ 01 (Daijiworld News/MSP): ನೈರುತ್ಯ ಮುಂಗಾರು ಜೂ.1 ರ ಸೋಮವಾರ ಅಧಿಕೃತವಾಗಿ ಕೇರಳ ರಾಜ್ಯವನ್ನು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.
ಈ ಬಾರಿ ವಾಡಿಕೆಯಂತೆ ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ನೈರುತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರಂದು ಕೇರಳದಲ್ಲಿ ಪ್ರವೇಶ ಪಡೆಯುತ್ತದೆ. ಇದಾದ ನಾಲ್ಕೈದು ದಿನದಲ್ಲೇ ಕಾವೇರಿ ಕೊಳ್ಳದ ಮೂಲಕ ಕರ್ನಾಟಕವನ್ನು ಮುಂಗಾರು ಪ್ರವೇಶಿಸುತ್ತದೆ.
ಇನ್ನು ಕೇರಳಕ್ಕೆ ಮುಂಗಾರು ಪ್ರವೇಶ ಆಗಮನದಿಂದ ಕರಾವಳಿಯಲ್ಲೂ ತುಂತುರು ಮಳೆ ಆರಂಭವಾಗಿದೆ. ಈ ನಡುವೆ ದೇಶದಲ್ಲಿ ಉತ್ತಮ ಮುಂಗಾರಿಗೆ ಪರಿಸ್ಥಿತಿಗಳು ಹೆಚ್ಚು ಅನುಕೂಲಕರವಾಗುತ್ತಿದ್ದು, ಜೂನ್ನಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಸರಾಸರಿಗಿಂತಲೂ (88 ಸೆಂ.ಮಿ) ಅಧಿಕ ಮಳೆ ಬೀಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನಿಗದಿಯಂತೆ ಮುಂಗಾರು ಮಳೆ ಪ್ರವೇಶ ಮಾಡಿದ್ದು ರೈತರಿಗೆ ಒಂದು ಕಡೆ ಖುಷಿ ತಂದರೆ, ಮತ್ತೊಂದೆಡೆ ಕಳೆದೆರಡು ವರ್ಷಗಳಿಂದ ಮಳೆ ಸೃಷ್ಟಿಸಿದ ಅನಾಹುತದಿಂದ ಈ ಬಾರಿ ಇನ್ನೇನು ಕಾದಿದೆಯೋ ಎಂಬ ಆತಂಕ ಕೂಡ ಕಾಡತೊಡಗಿದೆ.