ಬೆಂಗಳೂರು, ಜೂ. 01 (Daijiworld News/MB) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿಯ ವಾರ್ ರೂಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಇದೀಗ ಕಚೇರಿಯ ಸುತ್ತಮುತ್ತ ಸಾರ್ವಜನಿಕರ ಭೇಟಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದ್ದು ಸೋಂಕು ನಿವಾರಕ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಅಧಿಕಾರಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಭೀತಿ ಉಂಟಾಗಿದೆ. ಇನ್ನು ಈ ಅಧಿಕಾರಿ ಶುಕ್ರವಾರದಿಂದ ಕಚೇರಿಗೆ ಬಂದಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ, ಕೊರೊನಾ ದೃಢಪಟ್ಟ ಅಧಿಕಾರಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಬಿಬಿಎಂಪಿಯ ಇಡೀ ಕೇಂದ್ರ ಕಚೇರಿಯನ್ನು ಸೀಲ್ ಡೌನ್ ಮಾಡುವ ಅಗತ್ಯವಿಲ್ಲ. ಆದರೆ ಇಡೀ ಕಚೇರಿ ಪ್ರಾಂಗಣವನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಕೊರೊನಾ ನಿಯಂತ್ರಣ ತಂಡದ ನೋಡೆಲ್ ಅಧಿಕಾರಿಗಳನ್ನಾಗಿ ಆರೋಗ್ಯ ವಿಭಾಗದವರಲ್ಲದ ಅನೇಕ ಅಧಿಕಾರಿಗಳನ್ನು ನೇಮಿಸಲಾಗಿದ್ದು ಇವರು ಕೊರೊನಾ ದೃಢಪಟ್ಟ ವ್ಯಕ್ತಿ ಇರುವ ಪ್ರದೇಶದಲ್ಲಿ ಓಡಾಡಿದಾಗ ಸೋಂಕು ಇವರಿಗೆ ಹರಡಿರುವ ಸಾಧ್ಯತೆಯಿದೆ. ಸೋಂಕಿತ ವ್ಯಕ್ತಿ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿದ್ದು ಅವರು ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರನ್ನು ಭೇಟಿಯಾಗಿರುವ ಸಾಧ್ಯತೆಯಿದೆ. ಆದ್ದರಿಂದ ಅವರು ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.