ಬೆಂಗಳೂರು, ಜೂ 01 (Daijiworld News/MSP): ಬಿ.ಎಸ್ ಯಡಿಯೂರಪ್ಪ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ .ಅವರು ಈ ರಾಜ್ಯದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತವರು. ಅವರು ನಮ್ಮ ನಾಯಕರಾಗಿದ್ದು, ಪಕ್ಷ ಒಂದು ವೇಳೆ ನನಗೆ ರಾಜೀನಾಮೆ ನೀಡಲು ಸೂಚಿಸಿದರೆ ಅದಕ್ಕೆ ಸಿದ್ದ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ನಾನು ಮೂರನೇ ಬಾರಿ ಮಂತ್ರಿಯಾಗಿದ್ದೇನೆ. ಸ್ವಾರ್ಥದಿಂದ ಎಂದೂ ಕೂಡಾ ರಾಜಕೀಯ ಮಾಡಿದ ವ್ಯಕ್ತಿ ನಾನಲ್ಲ. ಸಮರ್ಥವಾಗಿ ಈ ಹಿಂದೆಯೂ ಆರೋಗ್ಯ ಇಲಾಖೆ ನಿರ್ವಹಿಸಿದೆ. ಅದೇ ಕಾರಣಕ್ಕೆ ಈ ಬಾರಿಯೂ ಅದೇ ಇಲಾಖೆಯನ್ನು ಕೊಟ್ಟಿದ್ದಾರೆ. ನಾನು ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿಲ್ಲ ಅಂತ ಯಾವತ್ತು ಬೇಸರಿಸಿಕೊಂಡಿಲ್ಲ. ಪಕ್ಷ ನನಗೆ ರಾಜೀನಾಮೆ ನೀಡಲು ತಿಳಿಸಿದರೆ ಖಂಡಿತವಾಗಿಯೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಸರ್ಕಾರ ರಚನೆಯಾದ ಹೊಸತರಲ್ಲಿ ನೆರೆ ಹಾವಳಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದಿನದ 24 ಗಂಟೆ ಮುಖ್ಯಮಂತ್ರಿಗಳು ಕೆಲಸ ಮಾಡಿದ್ದಾರೆ. ಕೋವಿಡ್-19 ಶುರುವಾದಗಲೇ ಲಾಕ್ ಡೌನ್ ಘೋಷಣೆ ಮಾಡಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ಕೂಡ ಯಾವುದೇ ಸಮಸ್ಯೆಯಾಗದ ಹಾಗೆ ನೋಡಿಕೊಂಡಿದ್ದಾರೆ. ಅವರು ಸಮರ್ಥ ನಾಯಕರು . ನಾವೆಲ್ಲಾ ಒಗ್ಗಟ್ಟಿನಿಂದ ಇದ್ದು ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಬಸವರಾಜ್ ಪಾಟೀಲ್ ಯತ್ನಾಳ್, ನಿರಾಣಿ, ಕತ್ತಿಯವರು ನಮ್ಮ ಹಿರಿಯ ನಾಯಕರು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ ಹಾಗೆಂದು ನಮ್ಮಲ್ಲಿ ಗೊಂದಲ ಇದೆ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ.