ನವದೆಹಲಿ, ಜೂ. 02 (Daijiworld News/MB) : ಚೀನಾದ ಗಡಿಯ ಉದ್ದಕ್ಕೂ ಭಾರತ ನಡೆಸುತ್ತಿರುವ ರಸ್ತೆ ಮತ್ತು ಇತರ ಮೂಲಸೌಕರ್ಯ ನಿರ್ಮಾಣ ಯೋಜನೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬುದನ್ನು ಭಾರತ ದೃಢಪಡಿಸಿದೆ.
ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಮತ್ತು ರೈಲ್ವೆ ಇಲಾಖೆಯ ಸಮನ್ವಯದಲ್ಲಿ ಎಲ್ಎಸಿಯ ಉದ್ದಕ್ಕೂ ಮೂಲ ಸೌಕರ್ಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಗೆ ವೇಗ ತುಂಬಲು ಭಾರತ ನಿರ್ಧರಿಸಿದೆ. ಆ ಹಿನ್ನಲೆಯಲ್ಲಿ ವಿಶೇಷ ರೈಲುಗಳ ಮೂಲಕ 12 ಸಾವಿರ ಕಾರ್ಮಿಕರನ್ನು ಜಾರ್ಖಂಡ್ನಿಂದ ಗಡಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಮೊದಲಿಗೆ ಜಾರ್ಖಂಡ್ ನಿಂದ ಚಂಡೀಗಡ ಮತ್ತು ಜಮ್ಮುವಿಗೆ ಕಳುಹಿಸಿ ಬಳಿಕ ಅಲ್ಲಿಂದ ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಕಾಶ್ಮೀರದ ಗಡಿ ಪ್ರದೇಶಗಳಿಗೆ ಕಳುಹಿಸಲಾಗುವುದು ಮಾಧ್ಯಮವೊಂದು ವರದಿ ಮಾಡಿದೆ.
ಇನ್ನು ಲಾಕ್ಡೌನ್ ಕಾರಣದಿಂದಾಗಿ ಕಾಮಗಾರಿ ನಿಧಾನವಾಗಿದ್ದು ಈಗ ಕಾಮಗಾರಿಯ ರಭಸ ಹೆಚ್ಚಿಸುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡುವುದು ಭಾರತದ ಉದ್ದೇಶ ಎಂದು ಹೇಳಲಾಗಿದೆ.
ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್ನಲ್ಲಿ ಪ್ರಕ್ಷುಬ್ಧ ಸ್ಥಿತಿ ಉಂಟಾಗಲು ಭಾರತದ ರಸ್ತೆ ಕಾಮಗಾರಿಯೇ ಕಾರಣ. ಗಡಿ ಪ್ರದೇಶದಲ್ಲಿ ಭಾರತವು ರಸ್ತೆ ನಿರ್ಮಿಸುತ್ತಿರುವುದಕ್ಕೆ ಚೀನಾದ ಆಕ್ಷೇಪ ಇದೆ. ವಿವಾದಿತ ಅಕ್ಷಾಯ್ ಚಿನ್ ಪ್ರದೇಶಕ್ಕೆ ವೇಗವಾಗಿ ಸೇನೆಯನ್ನು ರವಾನಿಸಲು ಸಾಧ್ಯವಾಗಬೇಕು ಎಂಬುದಕ್ಕಾಗಿ ಇಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂಬುದು ಚೀನಾದ ಆರೋಪವಾಗಿದೆ.