ಜೊಹಾನ್ಸ್ಬರ್ಗ್, ಜೂ. 02 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಿದೇಶದಲ್ಲಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದ್ದು ವಂದೇ ಭಾರತ್ ಮಿಷನ್ನ ಮೂರನೇ ಹಂತದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನೆರೆ ರಾಷ್ಟ್ರ ಕಿಂಗ್ಡಂ ಆಫ್ ಲೆಸೊಥೊದಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲಾಗುವುದು ಎಂದು ಭಾರತ ಸರ್ಕಾರ ತಿಳಿಸಿದೆ.
ಈ ಬಗ್ಗೆ ಭಾರತೀಯ ಹೈಕಮಿಷನ್ ಮಾಹಿತಿ ನೀಡಿದ್ದು ದಕ್ಷಿಣ ಆಫ್ರಿಕಾ ಸರ್ಕಾರದ ಅನುಮತಿ ಪಡೆದ ಬಳಿಕ ಜೂನ್ 18ರಂದು ಏರ್ ಇಂಡಿಯಾ ವಿಮಾನವು ಜೊಹಾನ್ಸ್ಬರ್ಗ್ನಿಂದ ದೆಹಲಿ ಮತ್ತು ಮುಂಬೈಗೆ ಸಂಚಾರ ನಡೆಸಲಿದೆ ಎಂದು ಹೇಳಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ವಿವಿಧ ದೇಶಗಳಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್ ಮುಖೇನ ಭಾರತಕ್ಕೆ ವಾಪಾಸ್ ಕರೆತರಲಾಗುತ್ತಿದ್ದು ವಿಮಾನ ಟಿಕೆಟ್ ಹಣ ಸ್ವದೇಶಕ್ಕೆ ಹಿಂದಿರುಗುವವರು ಪಾವತಿ ಮಾಡಬೇಕಾಗಿದೆ. ಆದರೆ ವಿಮಾನ ದರ ಇನ್ನೂ ನಿಗದಿಯಾಗಿಲ್ಲ ಎಂದು ವರದಿ ತಿಳಿಸಿದೆ.
ಭಾರತಕ್ಕೆ ಮರಳಿದ ನಂತರ ದೆಹಲಿ, ದೆಹಲಿ ಎನ್ಸಿಆರ್, ಹರಿಯಾಣ, ಭಿವಾಡಿ ಅಥವಾ ಛತ್ತೀಸ್ಗಡದಲ್ಲಿ ಅವರದ್ದೇ ಖರ್ಚಿನಲ್ಲಿ 7 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕು. ಬಳಿಕ 7 ದಿನ ಮನೆಯಲ್ಲೇ ಐಸೋಲೇಷನ್ನಲ್ಲಿರಬೇಕು. ಭಾರತಕ್ಕೆ ತಲುಪಿದ ಬಳಿಕ ಆರೋಗ್ಯ ಸೇತು ಆಪ್ ಬಳಕೆ ಕಡ್ಡಾಯವಾಗಿದೆ.