ನವದೆಹಲಿ, ಜೂ. 02 (Daijiworld News/MB) : "ಒಂದು ರಾಷ್ಟ್ರ ಒಂದು ಪಡಿತರ ಚೀಟಿ" (ಒನ್ ನೇಷನ್ ಒನ್ ರೇಷನ್) ಯೋಜನೆಯನ್ನು ಕೇಂದ್ರ ಸರ್ಕಾರ ಈಗಾಗಲೇ 20 ರಾಜ್ಯಗಳಲ್ಲಿ ಜಾರಿಗೊಳಿಸಿದ್ದು ಮಂದಿನ ವರ್ಷ ಮಾರ್ಚ್ 31ರೊಳಗೆ ರಾಷ್ಟ್ರದಾದ್ಯಂತ ಈ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಬಗ್ಗೆ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಸೋಮವಾರ ಟ್ವೀಟ್ ಮಾಡಿದ್ದು 2021ರ ಮಾರ್ಚ್ 31 ರೊಳಗೆ ದೇಶಾದ್ಯಂತ "ಒನ್ ನೇಷನ್ ಒನ್ ರೇಷನ್ ಕಾರ್ಡ್ " ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ನಿಟ್ಟಿನಲ್ಲಿ 2020ರ ಆಗಸ್ಟ್ 1 ರೊಳಗೆ ಉತ್ತರಾಖಂಡ್, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಇದನ್ನು ಕಾರ್ಯಗತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
"ನಾನು ಮೊದಲೇ ಘೋಷಿಸಿದಂತೆ, ಸರ್ಕಾರದ ಮಹತ್ವಾಕಾಂಕ್ಷೆಯ 'ಒನ್ ನೇಷನ್ ಒನ್ ರೇಷನ್ ಕಾರ್ಡ್' ಯೋಜನೆಗೆ ಇಂದು ಮೂರು ರಾಜ್ಯಗಳಾದ ಒಡಿಶಾ, ಸಿಕ್ಕಿಂ ಮತ್ತು ಮಿಜೋರಾಂನ್ನು ಸೇರ್ಪಡೆ ಮಾಡಲಾಗಿದೆ. ಇದರೊಂದಿಗೆ 20 ರಾಜ್ಯಗಳು ಐಎಂಪಿಡಿಎಸ್ (ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್) ಯೋಜನೆಗೆ ಸೇರಿವೆ ಎಂದು ಹೇಳಿದ್ದಾರೆ.
ಈ ಯೋಜನೆಯ ಪ್ರಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಯಾವುದೇ ಫಲಾನುಭವಿಗಳು ದೇಶದಲ್ಲಿ ಎಲ್ಲಿಯೂ ಪಡಿತರವನ್ನು ಪಡೆಯಬಹುದಾಗಿದೆ.