ನವದೆಹಲಿ, ಜೂ. 02 (Daijiworld News/MB) : ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರಿಗೆ ತಮ್ಮ ಪತ್ನಿಯ ಸಂಪರ್ಕದಿಂದಾಗಿ ಕೊರೊನಾ ವೈರಸ್ ಸೋಂಕು ತಗುಲಿದ್ದು ಪುತ್ರ ಸತ್ಪಾಲ್ ಮಹಾರಾಜ್ ಹಾಗೂ ಪುತ್ರನ ಪತ್ನಿಯಾದ ನಟಿ ಮೊಹೆನಾ ಕುಮಾರಿ ಸಿಂಗ್ ಅವರನ್ನು ಸೇರಿದಂತೆ ಒಟ್ಟು 22 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಸಚಿವರ ಪುತ್ರ ಸುಯೇಶ್ ರಾವತ್ ಕಳೆದ ವರ್ಷ ನಟಿ ಮೊಹೆನಾ ಕುಮಾರಿ ಸಿಂಗ್ ಅವರನ್ನು ಹರಿದ್ವಾರದಲ್ಲಿ ವರಿಸಿದ್ದರು ಎಂದು ವರದಿ ತಿಳಿಸಿದೆ.
ಕುಟುಂಬಕ್ಕೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಸಚಿವರ ಖಾಸಗಿ ನಿವಾಸವನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು ಕಳೆದ ಶುಕ್ರವಾರ ಸಚಿವ ಮಹಾರಾಜ್ ಅವರು ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದು ಇದೀಗ ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಸೇರಿ ಎಲ್ಲಾ ಸಚಿವರು ಸಹ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸಚಿವರ ಅವರ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಲಾಕ್ಡೌನ್ ಸಂದರ್ಭದಲ್ಲಿ ಹಲವು ಜನರು ಸಚಿವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಅವರ ಪತ್ನಿ ಸೇರಿ ಸುಮಾರು 40 ಮಂದಿಯನ್ನು ಐಸೋಲೇಶನ್ನಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇನ್ನು ಸಚಿವರು ಹಾಗೂ ಅವರ ಪತ್ನಿ ಧಾರ್ಮಿಕ ಬೋಧಕರಾಗಿದ್ದು ಅವರು ಸಾಕಷ್ಟು ಅನುಯಾಯಿಗಳು ಮತ್ತು ಬೆಂಬಲಿಗರಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿನ ತಮ್ಮ ಆಶ್ರಮಕ್ಕೆ ಸಚಿವರ ಪತ್ನಿ ತೆರಳಿದ್ದು ಈ ಸಂದರ್ಭದಲ್ಲಿ ಹಲವು ಬೆಂಬಲಿಗರನ್ನು, ಅನುಯಾಯಿಗಳನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.