ನವದೆಹಲಿ, ಜೂ. 02 (Daijiworld News/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದರೂ ಕೂಡಾ ಕೊರೊನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರವಾಗಿ ಪ್ರಸ್ತುತ 97581 ಸಕ್ರಿಯ ಕೊರೊನಾ ಪ್ರಕರಣಗಳಾಗಿದ್ದು 95526 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಅಂದರೆ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ. 48.19 ರಷ್ಟು ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾದಂತಾಗಿದೆ.
ದೇಶದಲ್ಲಿ ಒಟ್ಟಾರೆಯಾಗಿ 198706 ಮಂದಿಗೆ ಕೊರೊನಾ ಸೋಂಕು ತಗುಲಿದ್ದು 5598 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲೇ 8,171 ಮಂದಿಗೆ ಸೋಂಕು ಪಾಸಿಟಿವ್ ಆಗಿದ್ದು 204 ಜನರು ಕೊರೊನಾಗೆ ಬಲಿಯಾಗಿದ್ದಾರೆ. ಆದರೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ಎಪ್ರಿಲ್ 15 ರವರೆಗೆ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಶೇ. 11.42 ಇದ್ದರೆ, ಮೇ 3 ರಷ್ಟರಲ್ಲಿ ಶೇ.26.59 ಜನರು ಗುಣಮುಖರಾಗಿದ್ದು ಮೇ 18 ರಂದು ಶೇ.38.29 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಹಾಗೆಯೇ ಭಾರತದಲ್ಲಿ ಶೇ. 2.83 ರಷ್ಟು ಸೋಂಕಿತರು ಸೋಂಕಿಗೆ ಬಲಿಯಾಗಿದ್ದಾರೆ.