ನವದೆಹಲಿ, ಜೂ 02 (Daijiworld News/MSP): "ಆರ್ಥಿಕ ಬೆಳವಣಿಗೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಭಾರತವು ಕರೊನಾ ವೈರಸ್ ಲಾಕ್ಡೌನ್ನಿಂದ ಹಿಂದೆ ಸರಿದು 'ಅನ್ಲಾಕ್ ನ ಹಂತ 1 ನೇ ಹಂತಕ್ಕೆ ಪ್ರವೇಶಿಸಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
"ಭಾರತ ಮತ್ತೆ ತನ್ನ ಆರ್ಥಿಕ ಬೆಳವಣಿಗೆಯನ್ನು ಮರಳಿ ಪಡೆಯುತ್ತದೆ. ಭಾರತದ ಸಾಮರ್ಥ್ಯ ಮತ್ತು ಬಿಕ್ಕಟ್ಟು ನಿರ್ವಹಣೆಯ ಶಕ್ತಿಯ ಬಗ್ಗೆ ನನಗೆ ನಂಬಿಕೆ ಇದೆ.ನಮ್ಮ ದೇಶದಲ್ಲಿರುವ ಪ್ರತಿಭೆ, ತಂತ್ರಜ್ಞಾನ, ನಾವೀನ್ಯತೆ ಮತ್ತು ಬುದ್ಧಿಶಕ್ತಿಯನ್ನೂ ನಾನು ನಂಬುತ್ತೇನೆ.ಇದಲ್ಲದೆ ರೈತರು, ಸಣ್ಣ ಕೈಗಾರಿಕೆ ಮತ್ತು ಉದ್ಯಮಿಗಳ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅದಕ್ಕಾಗಿಯೇ ನಾವು, ನಮ್ಮ ಬೆಳವಣಿಗೆಯನ್ನು ಮರಳಿ ಪಡೆಯುವ ವಿಶ್ವಾಸವನ್ನು ಹೊಂದಿದ್ದೇನೆ" ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ 125 ನೇ ವಾರ್ಷಿಕ ಅಧಿವೇಶನದಲ್ಲಿ (ಸಿಐಐ) ಭಾಷಣ ಮಾಡುವಾಗ ಪ್ರಧಾನಿ ಹೇಳಿದರು.
ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ವೈರಸ್ ಬಿಕ್ಕಟ್ಟಿನ ಸಮಯದಲ್ಲಿ ಆನ್ಲೈನ್ ಕಾರ್ಯಕ್ರಮಗಳು ಸಾಮಾನ್ಯವಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಿಂದ ಹೊರಬರಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವ ಮನುಷ್ಯನ ಅತಿದೊಡ್ಡ ಶಕ್ತಿಯಾಗಿ ಇದು ಕೂಡಾ ಉದಾಹರಣೆಯಾಗಿದೆ. ಒಂದೆಡೆ, ಕೊರೊನಾ ವೈರಸ್ ಮತ್ತು ಅದಕ್ಕಿಂತ ಹೆಚ್ಚಿನದನ್ನು ಎದುರಿಸಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮತ್ತೊಂದೆಡೆ, ನಾವು ಆರ್ಥಿಕತೆಯ ಬೆಳವಣಿಗೆಯ ಬಗ್ಗೆಯೂ ಕಾಳಜಿ ವಹಿಸಬೇಕು. ನಾವು ನಾಗರಿಕರ ಜೀವಗಳನ್ನು ಉಳಿಸಬೇಕಾಗಿದೆ ಮತ್ತು ಆರ್ಥಿಕತೆಯ ಬೆಳವಣಿಗೆಗೆಗೂ ಚುರುಕುಮುಟ್ಟಿಸಬೇಕು" ಎಂದು ಅವರು ಹೇಳಿದರು. ಅನ್ಲಾಕ್ ನ ಒಂದನೇ ಹಂತದ ಘೋಷಣೆಯ ನಂತರ, ಇದು ಭಾರತದ ಆರ್ಥಿಕತೆಗೆ ಸಂಬಂಧಿಸಿದ ಅಂಶಗಳ ಕುರಿತು ಪ್ರಧಾನ ಮಂತ್ರಿಯ ಮೊದಲ ಪ್ರಮುಖ ಭಾಷಣವಾಗಿದೆ.