ಬೆಂಗಳೂರು, ಜೂ. 02 (Daijiworld News/MB) : "ರಾಜ್ಯದಲ್ಲೀಗ ಕೊರೊನಾ ವಿರುದ್ಧದ ಹೋರಾಟ ನಡೆಯುತ್ತಿದ್ದು ಕೊರೊನಾ ಲಾಕ್ಡೌನ್ನಿಂದಾಗಿ ಆರ್ಥಿಕವಾಗಿ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗ ಈ ಸಂದರ್ಭದಲ್ಲಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
"ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ನಮ್ಮ ಯಾವ ಆಕ್ಷೇಪವೂ ಇಲ್ಲ. ಆದರೆ ಈಗಾಗಲೇ ಕೊರೊನಾದಿಂದಾಗಿ ರಾಜ್ಯದಲ್ಲಿ ತೀವ್ರ ಸಂಕಷ್ಟ ಉಂಟಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮೊದಲು ಆ ಬಗ್ಗೆ ಗಮನ ನೀಡಬೇಕು. ಕೊರೊನಾ ಸಂಕಷ್ಟದಿಂದ ಹೊರಬಂದು ಆರ್ಥಿಕ ಸ್ಥಿತಿ ಸುಧಾರಿಸಿದ ಬಳಿಕ ವಿವೇಕಾನಂದರ ಪ್ರತಿಮೆ ನಿರ್ಮಾಣ ಮಾಡಲಿ" ಎಂದು ಹೇಳಿದ್ದಾರೆ.
ಈ ಹಿಂದೆ ವಸತಿ ಸಚಿವ ಸೋಮಣ್ಣ, "ಗುಜರಾತ್ನಲ್ಲಿರುವ ಸರ್ದಾರ್ ವಲ್ಲಭ ಬಾಯ್ ಪ್ರತಿಮೆ ಮಾದರಿಯಲ್ಲಿ ಆನೇಕಲ್ ಸಮೀಪ ಮುತ್ಯಾಲಮಡುವಿನಲ್ಲಿ 120 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಿಸಲು ಉದ್ಧೇಶಿಸಲಾಗಿದೆ. ಈ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದ್ದು ಆದರೆ ಇದಕ್ಕೆ ತಗಲುವ ವೆಚ್ಚವನ್ನು ಇನ್ನೂ ನಿಗದಿಸಿಲ್ಲ" ಎಂದು ತಿಳಿಸಿದ್ದರು.