ಕಲಬುರಗಿ, ಜೂ 02 (Daijiworld News/MSP): ನಮ್ಮ ದೇಶದ ಪ್ರಧಾನ ಮಂತ್ರಿಗಳು ಆಗ್ಗಾಗೆ ಟಿವಿಯಲ್ಲಿ ಕಾಣಿಸಿಕೊಂಡು ಪ್ರವಚನ ನೀಡುತ್ತಾರೆ. ಅಲ್ಲದೆ ಯಾರೊಂದಿಗೆ ಸಮಾಲೋಚನೆ ಚರ್ಚೆ ನಡೆಸದೆ ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಾರೆ. ತದನಂತರ ಎಲ್ಲ ಅಧಿಕಾರ ರಾಜ್ಯಗಳಿಗೆ ಬಿಟ್ಟು ಬಿಡುತ್ತಾರೆ. ಇತ್ತ ರಾಜ್ಯ ಸರ್ಕಾರ ಬೆಳಗ್ಗೆ - ಸಂಜೆಗೊಮ್ಮೆ ತನ್ನ ನಿರ್ಧಾರ ಬದಲಾಯಿಸುತ್ತೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಎಂದು ಸರ್ಕಾರ ಹಾಗೂ ಪ್ರಧಾನಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಲಾಕ್ ಡೌನ್ ಸಮಯದಲ್ಲಿ ಹಳಿಗಳಿದ್ದರೂ ಹಾದಿ ತಪ್ಪಿ ರೈಲುಗಳು ಚಲಿಸುತ್ತಿವೆ, ಎಲ್ಲೋ ತಲುಬೇಕಾದ ಎಲ್ಲಿಗೋ ತಲುಪಿದೆ. ಸಮರ್ಪಕವಾಗಿ ರೈಲು ಓಡಿಸಲಿಕ್ಕೆ ಬಾರದವರು ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ. ಸರಿಯಾದ ನಿರ್ಧಾರ, ಹಾಗೂ ಮುಂದಾಲೋಚನೆ ಮಾಡಿ ಮುನ್ನೆಡೆದರೆ ರೈಲುಗಳು ಹಾದಿ ತಪ್ಪುತ್ತಿರಲಿಲ್ಲಎಂದು ಇದೇ ವೇಳೆ ಹೇಳಿದರು.
ಏಕಪಕ್ಷೀಯವಾಗಿ ತೆಗೆದುಕೊಂಡ ನೋಟು ಅಮಾನ್ಯೀಕರಣ, ಜಿಎಸ್ಟಿ ಜಾರಿ ಮುಂತಾದ ಜ್ವಲಂತ ಪರಿಸ್ಥಿತಿಯ ಅರಿವಿದ್ದರೂ ಕೋವಿಡ್-19 ನಂತಹ ವೈರಸ್ ನಿಯಂತ್ರಿಸುವಲ್ಲಿ ಹುಡುಗಾಟದಂತೆ ನಡೆದುಕೊಂಡಿರುವ ಪರಿಣಾಮ ಪರಿಸ್ಥಿತಿ ಕೈ ಮೀರಿ ಹೋಗಿದೆ. ಕ್ರಮಬದ್ದವಾದ ನಿರ್ಧಾರಗಳನ್ನು ಕೈಗೊಳ್ಳದ ಪರಿಣಾಮ ದೇಶದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು ಅದೆಷ್ಟೂ ಜೀವಗಳನ್ನು ಬಲಿ ಪಡೆದಿದೆ ಎಂದು ಆರೋಪಿಸಿದರು.