ನವದೆಹಲಿ, ಜೂ. 02 (Daijiworld News/MB) : ಕೊರೊನಾ ವೈರಸ್ನ ವಿರುದ್ಧದ ಹೋರಾಟದ ನಡುವೆಯೂ ನಿಗದಿ ಪಡಿಸಲಾಗಿರುವ ಅವಧಿಯ ಒಳಗೆ ರಫೇಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ಪ್ರಾನ್ಸ್ ಬದ್ಧವಾಗಿದೆ ಎಂದು ತಿಳಿಸಿರುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಅವರು ಫ್ರಾನ್ಸ್ ಸಶಸ್ತ್ರ ಪಡೆಗಳ ಸಚಿವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಬಳಿಕ, ಟ್ವೀಟ್ ಮೂಲಕ ಈ ಬಗ್ಗೆ ತಿಳಿಸಿದ್ದು "ಇಂದು ಫ್ರಾನ್ಸ್ ಸಚಿವೆ ಫ್ಲಾರೆನ್ಸ್ ಪಾರ್ಲಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದೆ. ಕೊರೊನಾ ಪರಿಸ್ಥಿತಿ, ಪ್ರಾದೇಶಿಕ ಭದ್ರತೆ, ಭಾರತ-ಫ್ರಾನ್ಸ್ ನಡುವಣ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ಕುರಿತಾಗಿ ಮಾತುಕತೆ ನಡೆಸಿದ್ದೇವೆ. ಕೊರೊನಾ ವಿರುದ್ಧದ ಹೋರಾಟದ ಭಾರತ ಮತ್ತು ಫ್ರಾನ್ಸ್ನ ಸಶಸ್ತ್ರ ಪಡೆಗಳ ಪ್ರಯತ್ನವನ್ನೂ ನಾವು ಶ್ಲಾಘಿಸಿದ್ದೇವೆ. ಕೊರೊನಾ ಸಾಂಕ್ರಾಮಿಕದಿಂದ ಎದುರಾದ ಸವಾಲುಗಳ ನಡುವೆಯೂ ರಫೇಲ್ ವಿಮಾನವನ್ನು ಸಕಾಲಿಕವಾಗಿ ತಲುಪಿಸಲು ಫ್ರಾನ್ಸ್ ಬದ್ಧವಾಗಿದೆ ಎಂದು ತಿಳಿಸಿದೆ" ಎಂದು ತಿಳಿಸಿದ್ದಾರೆ.
2016ರ ಸೆಪ್ಟೆಂಬರ್ನಲ್ಲಿ ಸುಮಾರು ₹58,000 ಕೋಟಿ ವೆಚ್ಚದಲ್ಲಿ 36 ರಫೇಲ್ ಯುದ್ಧವಿಮಾನ ಖರೀದಿ ಮಾಡಲು ಭಾರತವು ಫ್ರಾನ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಮೇ ಅಂತ್ಯದೊಳಗೆ ಫ್ರಾನ್ಸ್ ಯುದ್ಧವಿಮಾನಗಳನ್ನು ಭಾರತಕ್ಕೆ ಕಳುಹಿಸಿಕೊಡಬೇಕೆಂದು ಈ ಹಿಂದೆ ನಿಗದಿಪಡಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಎರಡು ರಾಷ್ಟ್ರಗಳು ಮಾತುಕತೆ ನಡೆಸಿ ಎರಡು ತಿಂಗಳುಗಳ ಕಾಲ ಮುಂದೂಡಲಾಗಿತ್ತು. ಹಾಗಾಗಿ ಇನ್ನು ಜುಲೈ ಅಂತ್ಯದ ವೇಳೆಗೆ ನಾಲ್ಕು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಬೇಕಾಗಿದೆ. ಕಲೆ ದಿನಗಳ ಹಿಂದೆ ಭಾರತದಲ್ಲಿರುವ ಫ್ರೆಂಚ್ ರಾಯಭಾರಿ ಇಮ್ಯಾನ್ಯುಯಲ್ ಲೆನೈನ್ ನಿಗದಿತ ಅವಧಿಯಲ್ಲಿ ರಫೇಲ್ ಯುದ್ಧವಿಮಾನ ಪೂರೈಸುವುದಾಗಿ ಹೇಳಿದ್ದರು.