ಮುಂಬೈ, ಜೂ. 02 (Daijiworld News/MB) : ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಹಲವಾರು ಕಾರ್ಯಗಳು ಆನ್ಲೈನ್ ಮೂಲಕ ನಡೆದಿದೆ ಹಾಗೂ ನಡೆಯುತ್ತಿದೆ. ಆನ್ಲೈನ್ ವಿಡಿಯೋ ಕಾಲ್ ಮೂಲಕವೇ ವಿವಾಹವಾಗಿರುವ ನಿದರ್ಶನಗಳೂ ಕೂಡಾ ನಮ್ಮ ಕಣ್ಮುಂದಿದೆ. ಇದೀಗ ಅಂತ್ಯ ಸಂಸ್ಕಾರ ನಿರ್ವಹಣೆಯನ್ನು ಕೂಡಾ ಆನ್ಲೈನ್ ಮೂಲಕವೇ ಮಾಡುವ ಸೌಲಭ್ಯವನ್ನು ಪುಣೆ ಮೂಲದ ಸ್ಟಾರ್ಟ್ಅಪ್ ಗುರುಜೀ ಆನ್ ಡಿಮಾಂಡ್ ಒದಗಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕಂಪನಿಯ ಪಾಲುದಾರ ಪ್ರಣವ್ ಚವರೆ, ಕೊರೊನಾ ಲಾಕ್ಡೌನ್ ಇರುವ ಈ ಸಂದರ್ಭದಲ್ಲಿ ಸಾವನ್ನಪ್ಪಿದವರ ಅಂತ್ಯ ಕ್ರಿಯೆಗೆ ಕುಟುಂಬಸ್ಥರು ಕೂಡಾ ಬರಲು ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರವಲ್ಲದೆ ಅಂತ್ಯ ಸಂಸ್ಕಾರಕ್ಕೆ ಬೇಕಾದ ಅಗತ್ಯ ವಸ್ತುಗಳು ಕೂಡಾ ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಮ್ಮಲ್ಲಿ ಪರಿಹಾರವಿದ್ದು ಅಗತ್ಯ ವಸ್ತುಗಳನ್ನು ನಾವು ಪೂರೈಸುತ್ತೇವೆ ಎಂದು ಹೇಳಿದ್ದಾರೆ.
ಈ ಆನ್ಲೈನ್ ಸೇವೆಗೆ 'ಮೋಕ್ಷ ಸೇವಾ' ಎಂದು ಹೆಸರಿಡಲಾಗಿದ್ದು ಈ ತಿಂಗಳ ಅಂತ್ಯಕ್ಕೆ ಇದು ಆರಂಭವಾಗಲಿದೆ. ಈ ಆನ್ಲೈನ್ ಸೇವೆಯಲ್ಲಿ ಮೃತಪಟ್ಟ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಪಡೆಯಲು, ಚಟ್ಟ ಕಟ್ಟಲು ಸಹಾಯ ಮಾಡುವ, ಸ್ಮಶಾನಕ್ಕೆ ಮೃತದೇಹವನ್ನು ಸಾಗಿಸುವ, ಸ್ಮಶಾನದ ಪಾಸ್ ಪಡೆಯುವ ಮತ್ತು ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ವಸ್ತುಗಳನ್ನು ಆನ್ಲೈನ್ ಮೂಲಕ ಪಡೆಯಬಹುದಾಗಿದೆ. ಅಷ್ಟು ಮಾತ್ರವಲ್ಲದೇ ಅಂತ್ಯ ಸಂಸ್ಕಾರ ನಡೆದ ಬಳಿಕದ ಕ್ರಿಯಾ ವಿಧಾನಗಳಿಗೂ ಈ ಆಪ್ ಸೌಲಭ್ಯ ಒದಗಿಸಲಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕಂಪನಿಯ ಆ್ಯಪ್ ಅಥವಾ ವೆಬ್ಸೈಟ್ ಮೂಲಕ ಪುಣೆಯ ಪಿಂಪ್ರಿ-ಚಿಂಚ್ವಡಾ ಪ್ರದೇಶದಲ್ಲಿರುವ 650 ಅರ್ಚಕರ ಸೇವೆಗೆ ಬುಕಿಂಗ್ ಮಾಡಬಹುದಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕವೂ ಪೂಜೆ ಮಾಡಿಸಿಕೊಳ್ಳಬಹುದು.ಅರ್ಚಕರು ಮನೆಗೆ ಬಂದು ಪೂಜೆ ಮಾಡಬೇಕಾದ್ದಲ್ಲಿ ಎಲ್ಲಾ ಮುಂಜಾಗೃತಾ ಕ್ರಮದೊಂದಿಗೆ ತಮ್ಮ ಪ್ರದೇಶದ 5 ಕಿಮೀ ವ್ಯಾಪ್ತಿಯೊಳಗೆ ಲಭ್ಯವಿರುವ ಅರ್ಚಕರನ್ನು ಸಂಪರ್ಕ ಮಾಡಿಕೊಡಲಾಗುತ್ತದೆ ಎಂದು ಪ್ರಣವ್ ಹೇಳಿದ್ದಾರೆ.