ಧಾರವಾಡ, ಜೂ 02 (Daijiworld News/MSP): ಆನ್ಲೈನ್ ಶಿಕ್ಷಣ ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಮಾನದಂಡ ಸಿದ್ಧಪಡಿಸಲಾಗುವುದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 34 ಶೈಕ್ಷಣಿಕ ಜಿಲ್ಲೆಗಳ ಪೈಕಿ 15 ಶೈಕ್ಷಣಿಕ ಜಿಲ್ಲೆಗಳ ಪ್ರವಾಸ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಕೊಡುವುದು ಎಷ್ಟರಮಟ್ಟಿಗೆ ಸೂಕ್ತ ಎಂಬುದರ ಚಿಂತನೆ ನಡೆದಿದೆ. ನಿಮ್ಹಾನ್ಸ್ ವೈದ್ಯರು ಇದು ಸೂಕ್ತವಲ್ಲವೆಂದು ದೃಢಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆನ್ಲೈನ್ ಶಿಕ್ಷಣ ಯಾರಿಗೆ ಕೊಡಬೇಕು ಎಂಬುದರ ಬಗ್ಗೆ ಮಾನದಂಡ ಸಿದ್ಧಪಡಿಸಲಾಗುವುದು ಎಂದು ತಿಳಿಸಿದ್ದಾರೆ
ಅಲ್ಲದೆ ಈ ಬಾರಿ ಮಾನವೀಯತೆ ಆಧಾರದ ಮೇಲೆ ಶಾಲಾ, ಕಾಲೇಜುಗಳು ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡದಂತೆ ಸುತ್ತೋಲೆ ಹೊರಡಿಸಲಾಗಿದೆ . ಕೊರೊನಾದಿಂದಾಗಿ ಮಧ್ಯಮ ಹಾಗೂ ಬಡವರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಶುಲ್ಕವನ್ನು ಮಾನವೀಯತೆ ಆಧಾರದ ಮೇಲೆ ಹೆಚ್ಚಳ ಮಾಡದಂತೆ ಸುತ್ತೋಲೆ ಹೊರಡಿಸಲಾಗಿದೆ. ಈ ಸಂಬಂಧ ಸಹಾಯವಾಣಿಯನ್ನೂ ಆರಂಭಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಬಾಕಿ ಇರುವ ಶುಲ್ಕವನ್ನು ಪಾವತಿ ಮಾಡುವಂತೆ ಶಾಲಾ, ಕಾಲೇಜುಗಳು ಒತ್ತಡ ಹೇರಬಾರದು. ಯಾರು ಶಕ್ತರಿರುತ್ತಾರೋ ಅವರು ಸ್ವಯಂ ಪ್ರೇರಿತರಾಗಿ ಶುಲ್ಕ ಪಾವತಿ ಮಾಡಲು ಬಂದರೆ ಸ್ವೀಕರಿಸಬೇಕು. ಶಕ್ತರಲ್ಲದವರಿಗೆ ಸದ್ಯಕ್ಕೆ ಶುಲ್ಕ ಪಾವತಿ ಮಾಡುವಂತೆ ಒತ್ತಡ ಹೇರಬಾರದು ಎಂದು ಹೇಳಲಾಗಿದೆ ಎಂದರು.
ಶಾಲಾ, ಕಾಲೇಜುಗಳನ್ನು ಯಾವಾಗ ಪ್ರಾರಂಭ ಮಾಡಬೇಕು ಎಂಬುದರ ಬಗ್ಗೆ ಕೇಂದ್ರ ಸರ್ಕಾರದ ನಿರ್ದೇಶನಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಜೂನ್ 10 ರಿಂದ 12 ರ ಮಧ್ಯೆ ರಾಜ್ಯದ ಎಲ್ಲ 47 ಸಾವಿರ ಸರ್ಕಾರಿ ಶಾಲೆಗಳು ಖಾಸಗಿ ಮತ್ತು ಅನುದಾನಿತ ಶಾಲೆಗಳು ಪೋಷಕರ ಮತ್ತು ಎಸ್ಡಿಎಂಸಿಗಳ ಸಭೆ ನಡೆಸಿ ಶಾಲಾ ಪುನರಾರಂಭದ ಕುರಿತು ಸಲಹೆಗಳನ್ನು ಪಡೆಯಲು ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜೂನ್ 25 ರಿಂದ ಜುಲೈ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಸರ್ಕಾರ ಮಕ್ಕಳ ಸುರಕ್ಷತೆ ಹಾಗೂ ಆತ್ಮವಿಶ್ವಾಸಕ್ಕೆ ಆದ್ಯತೆ ನೀಡಿದೆ. ಒಂದು ಕೊಠಡಿಯಲ್ಲಿ 20 ಜನ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಲಾಗಿದ್ದು, ರಾಜ್ಯದಲ್ಲಿ 8,48,203 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಪರೀಕ್ಷಾ ಕೊಠಡಿಯೊಳಗೆ ಬಿಡಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು ಹಾಗೂ ಒಂದು ದೊಡ್ಡ ಅವಕಾಶ ಒದಗಿ ಬಂದಂತಾಗಿದೆ . ಪಿಯುಸಿಯ ಇಂಗ್ಲೀಷ್ ಪರೀಕ್ಷೆ ಬಾಕಿ ಉಳಿದಿದ್ದು, ಅದನ್ನು ಕೂಡ ಜೂನ್ 18 ರಂದು ನಡೆಸಲಾಗುತ್ತಿದ್ದು, ಪಿಯುಸಿಯ ವಿದ್ಯಾರ್ಥಿಗಳು ತಮ್ಮ ಕಾಲೇಜು ಬಿಟ್ಟು ಬೇರೆ ಸ್ಥಳಗಳಿಗೆ ಹೋಗಿದ್ದರೆ ಅವರು ಇರುವಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.