ಲಖನೌ, ಜೂ. 03 (Daijiworld News/MB) : ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಯುವತಿಯ ಪೋಷಕರು ಮರಕ್ಕೆ ಕಟ್ಟಿಹಾಕಿ ಸಜೀವ ದಹನ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್ಗಡದಲ್ಲಿ ಫತಾನ್ಪುರ್ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಅಂಬಿಕಾ ಪ್ರಸಾದ್ ಪಟೇಲ್ ಎಂದು ಗುರುತಿಸಲಾಗಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್, ಸೋಮವಾರ ರಾತ್ರಿ ಈ ಹತ್ಯೆ ನಡೆದಿದ್ದು ನಾವು ಸ್ಥಳಕ್ಕೆ ಆಗಮಿಸುವಾಗಲೇ ಆತ ಮೃತಪಟ್ಟಿದ್ದಾನೆ. ಹಾಗೆಯೇ ನಾವು ಸ್ಥಳಕ್ಕೆ ಹೋದಾಗ ಜನರ ಗುಂಪು ನಮ್ಮೊಂದಿಗೆ ಸಂಘರ್ಷ ಮಾಡಿ ಪೊಲೀಸ್ ವಾಹನವನ್ನು ಸುಟ್ಟು ಹಾಕಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಠಾಣೆಯ ಅಧಿಕಾರಿ ಉಮೇಶ್ ಸಿಂಗ್, ಪ್ರಕರಣದ ಬಗ್ಗೆ ತನಿಖೆ ನಡೆಸಿ ಕಾನ್ಪುರ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯ ತಂದೆ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಗ್ರಾಮಸ್ಥರ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪಟೇಲ್ ಕುಟುಂಬದವರ ವಿರುದ್ಧವೂ ಎಫ್ಐಆರ್ ದಾಖಲಿಸಾಗಿದೆ ಎಂದು ಹೇಳಿದ್ದಾರೆ.
ಮಾರ್ಚ್ 1ರಂದು ಮಹಿಳಾ ಪೊಲೀಸ್ ಸಿಬ್ಬಂದಿಯ ತಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಪಟೇಲ್ ತನ್ನ ಮಗಳ ಆಕ್ಷೇಪಾರ್ಹ ಫೋಟೊಗಳನ್ನು ಶೇರ್ ಮಾಡಿದ್ದಾನೆ ಎಂದು ದೂರು ನೀಡಿದ್ದು ಮಹಿಳೆಯ ಮಾನ ಹಾನಿಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.