ನವದೆಹಲಿ, ಜೂ 03 (DaijiworldNews/PY) : ಅಮೆರಿಕದೊಂದಿಗೆ ತಾಲಿಬಾನ್ ಮಾತುಕತೆ ನಡೆಸಿ ಅಲ್ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಸಾಧಿಸಿದೆ. ಇದು ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಭಾರತದ ಯತ್ನಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.
ಸಾಂದರ್ಭಿಕ ಚಿತ್ರ
ದೋಹಾದಲ್ಲಿ 2020 ಫೆ 29ರಂದು ಅಮೆರಿಕ ಹಾಗೂ ತಾಲಿಬಾನ್ ಪ್ರತಿನಿಧಿಗಳ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಪ್ರಕಾರ ಅಮೆರಿಕವು ಹಂತ ಹಂತವಾಗಿ ಅಫ್ಘಾನಿಸ್ಥಾನದಲ್ಲಿನ ತನ್ನ ಸೇನಾಪಡೆಯ ಬಲವನ್ನು ಹಿಂದೆ ಪಡೆದುಕೊಳ್ಳಬೇಕಿದೆ. ತಾಲಿಬಾನ್ ಅಲ್ಖೈದಾದೊಂದಿಗಿನ ಸಂಬಂಧವನ್ನು ಕೊನೆಗೊಳಿಸಬೇಕಿದೆ. ಈ ಮೂಲಕ ಅಲ್ಖೈದಾ ಸೇರಿದಂತೆ ಇತರ ಭಯೋತ್ಪಾಧಕ ಸಂಘಟನೆಗಳು ಅಫ್ಘಾನಿಸ್ತಾನದ ನೆಲ ಬಳಸಿಕೊಂಡು, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಮೇಲೆ ದಾಳಿ ನಡೆಸುವುದನ್ನು ತಡೆಯಲು ತಾಲಿಬಾನ್ ಬದ್ದವಾಗಿರಬೇಕಾಗುತ್ತದೆ.
ಈ ನಡುವೆ, ತಾಲಿಬಾನ್ ಹಾಗೂ ಅಲ್ಖೈದಾ ಪ್ರತಿನಿಧಿಗಳೊಂದಿಗೆ ದೋಹಾದಲ್ಲಿ ಶಾಂತಿ ಮಾತುಕತೆ ನಡೆಯುವ ಸಂದರ್ಭವೇ ಮಾತುಕತೆ ನಡೆದಿವೆ. ಇದಕ್ಕೂ ಮೊದಲು ಉಭಯ ಸಂಘಟನೆಗಳ ಮಧ್ಯೆ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಐದು ಬಾರಿ ಮಾತುಕತೆ ನಡೆದಿದ್ದವು. ಈ ಒಪ್ಪಂದದಲ್ಲಿ ಗಸಗಸೆ ವ್ಯಾಪಾರ ಸೇರಿದಂತೆ ತಾಲಿಬಾನ್ ಒಳಗೊಂಡಿರುವಂತ ಯಾವುದೇ ಅಪರಾಧ ಚಟುವಟಿಕೆಗಳ ವಿಚಾರವಾಗಿ ಪ್ರಸ್ತಾಪ ಮಾಡಿಲ್ಲ. ಭಾರತದ ಹಿತಾಸಕ್ತಿಗೆ ಇದು ಅನುಕೂಲಕರವಾಗಿಲ್ಲ. ಭಾರತದ ಮಧ್ಯಸ್ಥಿಕೆ ಯತ್ನಕ್ಕೆ ಈ ಎರಡೂ ವಿಚಾರಗಳು ಹಿನ್ನಡೆ ಉಂಟು ಮಾಡಿವೆ ಎಂದು ವರದಿ ತಿಳಿಸಿದೆ.