ಬೆಂಗಳೂರು, ಜೂ 03 (Daijiworld News/MSP): ರಾಜ್ಯದಲ್ಲಿ ಕೆಲವರು ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಸಾರ್ವಜನಿಕವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದಿದ್ದು ನಿಯಮ ಉಲ್ಲಂಘಿಸುವವರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು, ಸಿಇಒ ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆಗೆ ವಿಡಿಯೋ ಸಂವಾದದಲ್ಲಿ ಈ ವಿಚಾರ ತಿಳಿಸಿದರು. ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಪ್ರಯಾಣಿಕರಿಂದ ರಾಜ್ಯದಲ್ಲಿ ಕೋವಿಡ್ - 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್-19 ಪರೀಕ್ಷಾ ಕಿಟ್ ಗಳ ಪೂರೈಕೆಯಲ್ಲಿ ವ್ಯತ್ಯಾಸವಾಗಬಾರದು. ಹೋಮ್ ಕ್ವಾರಂಟೈನ್ ನಲ್ಲಿರುವವರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕೆಂದು ತಿಳಿಸಿದರು.
ಒಂದೆಡೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ, ಮತ್ತೊಂದೆಡೆ ಕ್ವಾರಂಟೈನ್ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದಿದೆ. ಇನ್ನು ಜೂ.8ರಿಂದ ಲಾಕ್ ಡೌನ್ ಸಡಿಲಿಕೆಗಳನ್ನು ಮಾಡುತ್ತಿರುವ ಕಾರಣ ಕಟ್ಟೆಚ್ಚರ ವಹಿಸಿ, ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಅಧಿಕಾರಿಗಳು ತಾಲೂಕು ಕೇಂದ್ರಗಳಲ್ಲಿ ಮೊಕ್ಕಾಂ ಹೂಡಿ ಮೇಲ್ವಿಚಾರಣೆ ಮಾಡಬೇಕು. ತಾಲೂಕುಗಳನ್ನು ವಿಭಾಗಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ . ಹೀಗಾಗಿ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದರು.