ನವದೆಹಲಿ, ಜೂ 03 (DaijiworldNews/PY) : ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಐಎನ್ಎಕ್ಸ್ ಮೀಡಿಯಾ ಭಷ್ಟಾಚಾರ ಪ್ರಕರಣದ ಚಾರ್ಜ್ ಶೀಟ್ನ್ನು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪಾಸ್ವರ್ಡ್ ಆಧಾರಿತ ಇ-ಚಾರ್ಜ್ಶೀಟ್ ಅನ್ನು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಎದುರು ಜಾರಿ ನಿರ್ದೇಶನಾಲಯ ಸಲ್ಲಿಸಿದೆ. ಲಾಕ್ಡೌನ್ ಜಾರಿಯಲ್ಲಿರುವ ಕಾರಣ ನ್ಯಾಯಾಲಯದ ಕಾರ್ಯಗಳು ಸ್ಥಗಿತಗೊಂಡಿದ್ದು, ಆರೋಪಿ ಪಟ್ಟಿಗಳನ್ನು ನ್ಯಾಯಾಲಯ ಆರಂಭವಾದ ತಕ್ಷಣ ದಾಖಲೆಗಳಲ್ಲಿ ಸಲ್ಲಿಸುವಂತೆ ಸೂಚನೆ ನೀಡಿದೆ. ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಚಾರ್ಟೆಟ್ ಅಕೌಂಟಂಟ್ ಎಸ್.ಎಸ್. ಭಾಸ್ಕರರಾಮನ್ ಸೇರಿದಂತೆ ಹಲವರ ಹೆಸರುಗಳು ಆರೋಪ ಪಟ್ಟಿಯಲ್ಲಿವೆ ಎಂದು ವರದಿಯಾಗಿದೆ.
ಪಿ.ಚಿದಂಬರಂ ಅವರು 2019 ಆಗಸ್ಟ್ 21ರಂದು ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಕ್ಕಾಗಿದ್ದರು. ಅಕ್ಟೋಬರ್ 16ರಂದು ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧನ ಮಾಡಿತ್ತು. 2019 ಅಕ್ಟೋಬರ್ 22ರಂದು ಸುಪ್ರೀಂಕೋರ್ಟ್ ಸಿಬಿಐ ಸಲ್ಲಿಸಿದ್ದ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಇಡಿ ಪ್ರಕರಣದಲ್ಲಿ ಡಿಸೆಂಬರ್ 4ರಂದು ಜಾಮೀನು ಪಡೆದು ಪಿ.ಚಿದಂಬರಂ ಅವರು ಹೊರ ಬಂದಿದ್ದಾರೆ.