ಮಲಪ್ಪುರಂ, ಜೂ 03 (Daijiworld News/MSP): ಆಹಾರ ಅರಸಿ ಬಂದ ಗರ್ಭವತಿ ಆನೆಗೆ ಪಟಾಕಿ ತುಂಬಿದ ಅನಾನಸು ನೀಡಿ, ಅದು ಸ್ಫೋಟಗೊಳ್ಳುವಂತೆ ಮಾಡಿ ಕ್ರೂರವಾಗಿ ಹತ್ಯೆ ಮಾಡಿದ ಘಟನೆ ದಾರುಣ ಘಟನೆ ಕೇರಳ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಅರಣ್ಯ ಅಧಿಕಾರಿಯೊಬ್ಬರು ಆನೆಯ ಭೀಕರ ಹತ್ಯೆಯ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ಗರ್ಭಿಣಿಯಾದ ಈ ಕಾಡಾನೆ ಹಲವಾರು ಬಾರಿ ನಾಡಿಗೆ ಆಹಾರ ಅರಸಿ ಬರುತ್ತಿತ್ತು. ತನಗೆ ಸಿಕ್ಕ ಆಹಾರವನ್ನು ತಿಂದು ಜೀವ ಹಾನಿ ಮಾಡದೆ ಮತ್ತೆ ಕಾಡಿಗೆ ಮರಳುತ್ತಿತ್ತು. ಈ ಬಾರಿಯೂ ಆಹಾರವನ್ನು ಹುಡುಕುತ್ತಾ ಹತ್ತಿರದ ಹಳ್ಳಿಗೆ ಅಡ್ಡಾಡುತ್ತಿತ್ತು. ಆಹಾರಕ್ಕಾಗಿ ಬೀದಿಗಳಲ್ಲಿ ನಡೆಯುತ್ತಿದ್ದಾಗ, ದುರುಳರು ಆನೆಗೆ ಪಟಾಕಿ ತುಂಬಿದ ಅನಾನಸ್ ನೀಡಿ ಸಾವಿಗೆ ಕಾರಣರಾಗಿದ್ದಾರೆ.
ಅರಣ್ಯ ಅಧಿಕಾರಿ ಮೋಹನ್ ಕೃಷ್ಣನ್ ಈ ಬಗ್ಗೆ ಮನಕಲಕುವಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ " ಆಕೆ ಎಲ್ಲರನ್ನೂ ನಂಬಿದ್ದಳು. ತಾನು ಸೇವಿಸಿದ ಅನಾನಸ್ ಸ್ಫೋಟಗೊಂಡ ನಂತರವೂ , ಆಕೆ ಇನ್ನೇನು 18 ರಿಂದ 20 ತಿಂಗಳಲ್ಲಿ ಜನ್ಮ ನೀಡಲಿರುವ ತನ್ನ ಮರಿಯ ಬಗ್ಗೆ ಯೋಚಿಸಿ ಆಘಾತಕ್ಕೊಳಗಾಗಿರಬಹುದು,
ಆಕೆಯ ಬಾಯಿಯಲ್ಲಿ ಪಟಾಕಿ ಸ್ಫೋಟ ಎಷ್ಟು ಶಕ್ತಿಯುತವಾಗಿತ್ತೆಂದರೆ ಆಕೆಯ ನಾಲಿಗೆ ಮತ್ತು ಬಾಯಿಗೆ ಗಂಭೀರ ಗಾಯಗಳಾಗಿತ್ತು. ತೀವ್ರವಾದ ನೋವಿನಿಂದ ಮತ್ತು ಹಸಿವಿನಿಂದ ಹಳ್ಳಿಯಲ್ಲಿ ಅಡ್ದಾಡಿತು. ಬಾಯಿಯ ಛಿದ್ರ ಗಾಯಗಳಿಂದಾಗಿ ಆಕೆಗೆ ಏನನ್ನೂ ತಿನ್ನಲು ಸಾಧ್ಯವಾಗಲಿಲ್ಲ.
"ಆದರೆ ಹಳ್ಳಿಯ ಬೀದಿಗಳಲ್ಲಿ ಆಕೆ ಅಗಾಧವಾದ ನೋವನ್ನು ಅನುಭವಿಸುತ್ತಾ ಧಿಕ್ಕಾಪಾಲಾದಾಗ ಆಕೆ ಒಬ್ಬ ಮನುಷ್ಯರಿಗೂ ಹಾನಿ ಮಾಡಲಿಲ್ಲ. ಒಂದೇ ಒಂದು ಮನೆಯನ್ನು ಪುಡಿ ಮಾಡಲಿಲ್ಲ. ಯಾಕೆಂದರೆ ಆಕೆ ಉತ್ತಮಳಾಗಿದ್ದಳು, ಮತ್ತು ಮನುಷ್ಯರನ್ನು ನಂಬಿದ್ದಳು ಎಂದು ಅದಕ್ಕಾಗಿಯೇ ನಾನು ಹೇಳಿದ್ದು.
ಆನೆ ನೋವು ಸಹಿಸದೆ ಕೊನೆಗೆ ವೆಲ್ಲಿಯಾರ್ ನದಿಯವರೆಗೆ ನಡೆದು ಅಸಹನೀಯ ನೋವಿನಿಂದ ಕೊಂಚ ಪರಿಹಾರ ಪಡೆಯಲು ನೀರಿಗೆ ಇಳಿಯಿತು. ಆಕೆಯ ಮೇಲಿನ ಗಾಯಗಳ ಮೇಲೆ ನೊಣಗಳು ಮತ್ತು ಇತರ ಕೀಟಗಳನ್ನು ತಪ್ಪಿಸಲು ಅವಳು ಇದನ್ನು ಮಾಡಿರಬೇಕು . ಆಕೆಗೆ ನದಿಯಿಂದ ಹೊರಗೆ ಕರೆದೊಯ್ಯಲು ಅರಣ್ಯ ಅಧಿಕಾರಿಗಳು "ಸುರಂದ್ರನ್ " ಮತ್ತು "ನೀಲಕಂಠನ್’ ಎಂದು ಹೆಸರಿನ ಎರಡು ಆನೆಗಳನ್ನು ಕರೆತಂದರು. ಆದ್ರೆ ಆಕೆಗೆ ಸಿಕ್ಸ್ ಸೆನ್ಸ್ ನ ಅರಿವಾಗಿರಬೇಕು. ಅವಳು ನಮಗೆ ಏನನ್ನೂ ಮಾಡಲು ಬಿಡಲಿಲ್ಲ.ಆನೆಯನ್ನು ರಕ್ಷಿಸಲು ಅಧಿಕಾರಿಗಳು ಹಲವಾರು ಗಂಟೆಗಳ ಪ್ರಯತ್ನಗಳ ಬಳಿಕ, ಮೇ 27 ರಂದು ಸಂಜೆ 4 ಗಂಟೆಗೆ ನೀರಿನಲ್ಲಿ ನಿಂತು ಸಾವನ್ನಪ್ಪಿದಳು.
ಆಕೆಗೆ ಅರ್ಹವಾದ ವಿದಾಯವನ್ನು ನಾವು ಸಲ್ಲಿಸಬೇಕಾಗಿತ್ತು. ಅದಕ್ಕಾಗಿ ನಾವು ಅವಳನ್ನು ಲಾರಿಯಲ್ಲಿ ಕಾಡಿನೊಳಗೆ ಕರೆದೊಯ್ದೆವು. ಅವಳು ಅಲ್ಲಿ ಕಟ್ಟಿಗೆಯ ಮೇಲೆ, ಅವಳು ಆಡಿದ ಬೆಳೆದ ಭೂಮಿಯಲ್ಲಿ ನಿಶ್ಚಲವಾಗಿ ಮಲಗಿದ್ದಳು. ಆಕೆಯ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರು "ಆಕೆ ಒಬ್ಬಂಟಿಯಾಗಿರಲಿಲ್ಲ. ಇನ್ನೇನು ತಾಯಿಯಾಗುವ ನಿರೀಕ್ಷೆಯಲ್ಲಿದ್ದಳು" ಎನ್ನುವಾಗ ಭಾವನೆಗಳ ಕಟ್ಟೆ ಒಡೆದಿತ್ತು. ನಾವು ಅವಳ ಮುಂದೆ ನಮಸ್ಕರಿಸಿ ಅಂತಿಮ ನಮನ ಸಲ್ಲಿಸಿದೆವು ಎಂದು ಎಂದು ಆನೆಯ ಫೋಟೋಗಳೊಂದಿಗೆ ಮಲಯಾಳಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.