ಮುಂಬೈ, ಜೂ. 03 (Daijiworld News/MB) : ಮುಂಬೈನ ನೈರುತ್ಯ ದಿಕ್ಕಿನಲ್ಲಿ 190 ಕಿ.ಮೀ ದೂರದಲ್ಲಿ ನಿಸರ್ಗ ಚಂಡಮಾರುತ ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಪ್ಪಳಿಸುವ ಸಾಧ್ಯತೆ ಇದ್ದು ಎಲ್ಲಾ ದೇಶಿಯ ವಿಮಾನಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ.
ರಾಯಗಡ್ ಜಿಲ್ಲೆಯ ಹರಿಹರೇಶ್ವರ ಬಳಿ ಭೂಕುಸಿತವನ್ನುಂಟಾಗುವ ನಿರೀಕ್ಷೆಯಿದ್ದು ತುರ್ತು ಸೇವೆಗಳು, ಪೊಲೀಸ್, ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್, ಸೇನೆ, ನೌಕಾಪಡೆ, ವಾಯುಪಡೆ, ಕೋಸ್ಟ್-ಗಾರ್ಡ್, ಹೋಮ್-ಗಾರ್ಡ್ ಮತ್ತು ಇತರರು ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದಾರೆ.
ಜನರ ಮೇಲೆ ಪರಿಣಾಮ ಬೀರುವ ಕಾರಣದಿಂದಾಗಿ ಮುಂಬೈ ಪೊಲೀಸರು ಸೆಕ್ಷನ್ 144ರಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಈಗಾಗಲೇ ಹವಾಮಾನ ಇಲಾಖೆಯು ನಿಸರ್ಗ ಚಂಡಮಾರುತದ ಪರಿಣಾಮವಾಗಿ ಮುಂಬೈ, ಪಲ್ಗಾರ್, ಥಾಣೆ, ರಾಯ್ ಗಢ್ ಜಿಲ್ಲೆಗಳು ಹಾಗೂ ಉತ್ತರ ಮಧ್ಯ ಮಹಾರಾಷ್ಟ್ರದಲ್ಲಿ, ಕರ್ನಾಟಕದ ತೀರಭಾಗ ಮತ್ತು ಮರಟಾವಾಡಗಳಲ್ಲಿ ಆರು ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.
ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಚಂಡಮಾರುತದ ಕಾರಣದಿಂದಾಗಿ ಬುಧವಾರ 50 ವಿಮಾನಗಳಿಗೆ ಬದಲಾಗಿ ಕೇವಲ 19 ವಿಮಾನಗಳನ್ನು ಮಾತ್ರ ಹಾರಾಟ ನಡೆಸಲಿದೆ ಎಂದು ಘೋಷಿಸಿತ್ತು.
ಏರ್ ಇಂಡಿಯಾ, ಏರ್ಏಷ್ಯಾ, ಇಂಡಿಗೊ, ಗೋಏರ್ ಮತ್ತು ಸ್ಪೈಸ್ಜೆಟ್ ವಿಮಾನಗಳ ವೇಳಾಪಟ್ಟಿಯಲ್ಲಿ ಕೊನೆಯ ನಿಮಿಷದ ಬದಲಾವಣೆಯ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇನ್ನು ನಿಸರ್ಗ ಚಂಡಮಾರುತದ ಪರಿಣಾಮವಾಗಿ ಕೇಂದ್ರ ರೈಲ್ವೆಯ ಸಂಚಾರ ಸಮಯದಲ್ಲೂ ಬದಲಾವಣೆಯಾಗಿದ್ದು ಮುಂಬೈನಿಂದ ಹೊರಡುವ ಐದು ವಿಶೇಷ ರೈಲುಗಳ ವೇಳಾಪಟ್ಟಿ ಬದಲಿಸಲಾಗಿದೆ.
ನಿಸರ್ಗ ಚಂಡಮಾರುತಕ್ಕೆ ಸಿಲುಕಿ ಮುಳುಗುವ ಅಪಾಯದಲ್ಲಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಭಟ್ಕಳ ಮೂಲದ ಏಳು ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ದೋಣಿಗಳ ಮೀನುಗಾರರು ರಕ್ಷಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಈಗಾಗಲೇ ಸುಮಾರು ೨,೦೦೦ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು ತಗ್ಗು ಪ್ರದೇಶಗಳಲ್ಲಿ 2,000 ಕ್ಕೂ ಹೆಚ್ಚು ಕೊಳೆಗೇರಿ ನಿವಾಸಿಗಳನ್ನು ಸ್ಥಳಾಂತರಿಸಲು ತಿಳಿಸಲಾಗಿದೆ.