ರಾಮನಗರ, ಜೂ 03 (DaijiworldNews/PY) : ನಮ್ಮಲ್ಲಿನ ಪ್ರತಿ ಶಾಸಕ, ಕಾರ್ಯಕರ್ತರಿಗೂ ಬೇಕಾದ್ದನ್ನು ಕೇಳುವ ಹಕ್ಕಿದೆ. ಕಾಂಗ್ರೆಸ್ನ ಹಾಗೆ ನಮ್ಮದು ದುರ್ಬಲ ಹೈಕಮಾಂಡ್ ಅಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ವರ್ಷದ ಅವಧಿಗೂ ಬಿಎಸ್ವೈ ಅವರೇ ಮುಖ್ಯಮಂತ್ರಿ. ನಮ್ಮಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ನಮ್ಮಲ್ಲಿನ ಪ್ರತಿ ಶಾಸಕ ಹಾಗೂ ಕಾರ್ಯಕರ್ತರಿಗೂ ಬೇಕಾದ್ದನ್ನು ಕೇಳುವ ಹಕ್ಕು ಇದೆ. ಕೆಲವರು ಕೇಳಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಇನ್ನೊಂದು ವಾರದಲ್ಲಿ ರಾಜ್ಯಸಭೆ, ಪರಷತ್ ಚುನಾವಣೆ ಸಂಬಂಧ ಸಭೆ ನಡೆಯಲಿದ್ದು, ಬಳಿಕವೇ ಅಭ್ಯರ್ಥಿಗಳ ನಿರ್ಧಾರವಾಗಲಿದೆ. ಯಾರನ್ನೂ ಇಲ್ಲಿಯವರೆಗೆ ಪಕ್ಷ ಅಂತಿಮಗೊಳಿಸಿಲ್ಲ ಎಂದು ತಿಳಿಸಿದರು.
ಒಡೆದು ಆಳುವುದು ಕಾಂಗ್ರೆಸ್ನ ಚಾಳಿ, ಅವರೇ ದೇವೇಗೌಡರನ್ನು ಕೆಳಗಿಳಿಸಿದ್ದು. ಜೆಡಿಎಸ್ನವರಿಗೆ ಈಗ ಅದರ ಅರಿವಾಗಿದೆ. ನಾವು ಹಿಂದೊಮ್ಮೆ ಜೆಡಿಎಸ್ನೊಂದಿಗೆ ಆಡಳಿತ ನಡೆಸಿದ್ದೆವು. ಮತ್ತೆ ಸಹಕಾರ ನೀಡುವುದಾದರೆ ಸ್ವಾಗತಿಸುತ್ತೇವೆ ಎಂದರು.
ನಿಸರ್ಗ ಚಂಡಮಾರುತದ ಪ್ರಭಾವ ರಾಜ್ಯದ ಮೇಲೆ ಕಡಿಮೆ. ರಾಜ್ಯದ ಕರಾವಳಿ, ಮಲೆನಾಡು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.