ಕೊಪ್ಪಳ, ಜೂ. 03 (Daijiworld News/MB) : ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇದ್ದು ಇದೇ ಬಿಜೆಪಿಯಲ್ಲಿ ಅಸಮಾಧಾನ ಉಂಟಾಗಲು ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸಂವಿಧಾನಿಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಸಂವಿಧಾನಿಕ ಮುಖ್ಯಮಂತ್ರಿ ವಿಜಯೇಂದ್ರ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಸರ್ಕಾರ ಭಷ್ಟಾಚಾರದಿಂದ ಕೂಡಿದ್ದು ಶಾಸಕರಿಗೆ ನೀಡಲಾದ ಅನುದಾನವನ್ನು ಹಿಂಪಡೆದಿದ್ದಾರೆ. ಬೇರೆ ಅನುದಾನವನ್ನೂ ನೀಡಿಲ್ಲ. ಶಾಸಕರು ಬಂಡಾಳ ಏಳಲು ಇದು ಕೂಡಾ ಕಾರಣವಾಗಿದೆ ಎಂದರು.
ಈಗಾಗಲೇ ಯತ್ನಾಳ್ ಅವರು ಯಡಿಯೂರಪ್ಪ ನಮ್ಮ ನಾಯಕ ಅಲ್ಲ. ಮೋದಿ, ಅಮಿತ್ ಷಾ, ನಡ್ಡಾ ನಮ್ಮ ನಾಯಕರು ಎಂದು ಹೇಳಿದ್ದಾರೆ. ನಾವು ಬಿಜೆಪಿಯಲ್ಲಿ ತಲೆಎತ್ತಿರುವ ಅಸಮಾಧಾನದ ವಿಚಾರಕ್ಕೆ ಕೈ ಹಾಕುವುದಿಲ್ಲ. ಬಿಜೆಪಿ ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಕೊರೊನಾ ವಿಷಯದಲ್ಲಿ ಸಿದ್ದರಾಮಯ್ಯ ಪಿಎಚ್ಡಿ ಮಾಡಿದ್ದಾರ ಎಂಬ ಬಿ.ಸಿ.ಪಾಟೀಲ ಪ್ರಶ್ನೆಗೆ ಉತ್ತರಿಸಿದ ಅವರು, ಕೊರೊನಾದಿಂದ ಎಚ್ಚರವಾಗಿರಲು ಸಾಮಾನ್ಯ ಜ್ಞಾನವಿದ್ದರೆ ಸಾಕು. ಅದಕ್ಕೆ ಪಿಎಚ್ಡಿ ಮಾಡುವ ಅಗತ್ಯವಿಲ್ಲ. ಇದನ್ನು ಬಿಸಿ ಪಾಟೀಲ್ಗೆ ನೀವು ತಿಳಿಸಬೇಕು ಎಂದು ತಿರುಗೇಟು ನೀಡಿದರು.
ವಲಸೆ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಮಾಡಿಲ್ಲ. ಊಟ, ಉದ್ಯೋಗ ಕೊಡಲಿಲ್ಲ. 6 ಲಕ್ಷಕ್ಕೂ ಅಧಿಕ ಜನ ವಲಸೆ ಹೋಗಿದ್ದು ಹೀಗಾಗಿ ಪ್ರತಿಯೊಬ್ಬ ವಲಸೆ ಕಾರ್ಮಿಕರಿಗೆ ₹ 10 ಸಾವಿರ ಕೊಡುವಂತೆ ತಿಳಿಸಿದ್ದೆ. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ಸತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಸಿಟಿ ರವಿ ಸಿದ್ದರಾಮಯ್ಯ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಅಜ್ಞಾನವಿದ್ದು ದುರುದ್ದೇಶದಿಂದ ಈ ಹೇಳಿಕೆ ನೀಡುತ್ತಿದ್ದಾರೆ. ದೇಶದಲ್ಲಿ ಆರ್ಥಿಕ ಸಂಕಷ್ಟವಿದ್ದರೂ ರಾಜ್ಯದಲ್ಲಿ ನಮ್ಮ ಸರ್ಕಾರವಿರುವಾಗ ಆರ್ಥಿಕ ಶಿಸ್ತಿನಲ್ಲಿ ಕರ್ನಾಟಕ ಸರ್ಕಾರ ಮೊದಲನೇ ಸ್ಥಾನದಲ್ಲಿತ್ತು. ಈ ಬಗ್ಗೆ ಆರ್ಬಿಐ ಸೇರಿದಂತೆ ಹಲವು ಸಮೀಕ್ಷೆಗಳು ತಿಳಿಸಿದೆ. ಅಷ್ಟೇ ಅಲ್ಲದೇ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಕೂಡಾ ಹಾಗೆಯೇ ಹೇಳಿದ್ದಾರೆ. ಸೋಮಣ್ಣ ಯಾವ ಆರ್ಥಿಕ ತಜ್ಞ? ಎಂದು ಪ್ರಶ್ನಿಸಿದರು.
ಈಗ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದ್ದು ಸಂಬಳ ನೀಡುವ ಹಣವೂ ಇಲ್ಲ. ಜಿಡಿಪಿ ಹೆಚ್ಚಳದಲ್ಲೂ ಪ್ರಗತಿಯಿಲ್ಲ.ಹೀಗೆ ಮುಂದುವರೆದ್ದಲ್ಲಿ ದೇಶದಲ್ಲಿ ಋಣಾತ್ಮಕ ಪ್ರಗತಿಯಾಗಲಿದೆ ಅದುವೇ ಮೋದಿ ಸಾಧನೆ ಎಂದು ಟೀಕೆ ಮಾಡಿದರು.
ಇನ್ನೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಗುರಿತಿಸಿಕೊಂಡವರೇ ಹೆಚ್ಚು ಜನ ಗೆದ್ದಿದ್ದು ಇದೇ ಭಯದಿಂದ ಬಿಜೆಪಿಯವರು ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುತ್ತಿದ್ದಾರೆ ಎಂದು ಹೇಳಿದರು.
ಹಾಗೆಯೇ ಡಿಕೆಶಿ ಹಾಗೂ ತನ್ನ ಮಧ್ಯೆ ಅಸಮಾಧಾನವಿದೆ ಎಂದು ಆಗುತ್ತಿರುವ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಅವರು ಡಿಕೆಶಿ ಮತ್ತು ನನ್ನ ಮಧ್ಯೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದರು.
ಇನ್ನೂ ಎರಡು ತಿಂಗಳುಗಳ ಕಾಲ ಶಾಲೆಗಳನ್ನು ಆರಂಭಿಸಬಾರದು. ಆರಂಭ ಮಾಡುವಾಗ ಎಲ್ಲಾ ಪೂರ್ವ ಸಿದ್ಧತೆ ಮಾಡಬೇಕು. . ಮಕ್ಕಳಿಗೆಮಾಸ್ಕ್, ಸ್ಯಾನಿಟೈಸರ್ ವಿತರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಬೇಕು. ನಾವು ಶಾಲೆ ಇಲ್ಲದ ಸಂದರ್ಭದಲ್ಲಿ ಓತಿಕ್ಯಾತ ಹೊಡಿಯೋಕೆ ಹೋಗ್ತಾ ಇದ್ವಿ. ಮಕ್ಕಳೂ ಹಾಗೇ ಮಾಡುತ್ತವೆ ಎಂದು ಹಾಸ್ಯ ಮಾಡಿದರು.