ನವದೆಹಲಿ, ಜೂ 03 (Daijiworld News/MSP): ಇಂಡಿಯಾ ಬದಲಿಗೆ ಭಾರತ ಎಂದು ಹೆಸರು ಬದಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಕೋರ್ಟ್ ಇಂದು ವಜಾಗೊಳಿಸಿದೆ. ಇಂಡಿಯಾಗೆ ಭಾರತ ಎಂಬ ಮತ್ತೊಂದು ಹೆಸರು ಇದೆಯೆಂದು ಭಾರತೀಯ ಸಂವಿಧಾನದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ನ್ಯಾಯಾಲಯದ ಮುಂದೆ ಈ ವಿಷಯವನ್ನು ತರುವ ಅಗತ್ಯವಿಲ್ಲ ಎಂದು ಹೇಳಿ ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು.
ಆದರೆ ಇದೇ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠ ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳ ಮುಂದೆ ಪ್ರಸ್ತಾವಿಸಿ ಪ್ರಾತಿನಿಧ್ಯ ಎಂದು ಪರಿಗಣಿಸಲು ಅವಕಾಶ ಮಾಡಿಕೊಟ್ಟಿತು.
ಅರ್ಜಿದಾರರ ಪರ ವಕೀಲಅಸ್ವಿನ್ ವೈಶ್, 'ಇಂಡಿಯಾ' ಎಂಬ ಹೆಸರು ಗ್ರೀಕ್ ಪದ "ಇಂಡಿಕಾ" ದಿಂದ ಬಂದಿದೆ ಇಂಡಿಯಾ ಎಂಬ ಪರಕೀಯ ಪದದ ಬದಲು ಭಾರತ ಎಂಬ ಸ್ವದೇಶಿ ಹೆಸರನ್ನು ಬದಲಾಯಿಸುವುದು ಸೂಕ್ತ ಎಂದು ವಾದಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಎಸ್.ಎ.ಬೋಬ್ಡೆ ಪೀಠವು ಸಂವಿಧಾನದಲ್ಲಿಯೇ ಇಂಡಿಯಾ ಮತ್ತು ಭಾರತ ಎಂಬ ಪದಗಳನ್ನು ಬಳಸಲು ಭಾರತೀಯ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಖವಿದೆ. ಹೀಗಿದ್ದರೂ ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯದವರೆಗೆ ತರುವ ಅಗತ್ಯವೇನಿತ್ತು.ಇಂತಹಾ ಅರ್ಜಿಯನ್ನು ಮನರಂಜನೆಗಾಗಿ ನ್ಯಾಯಾಲಯದ ಮುಂದೆ ತರುವುದು ಸಲ್ಲದು ಎಂಬುದನ್ನು ಕೋರ್ಟ್ ಪ್ರಶ್ನಿಸಿತ್ತು. ಈ ಅರ್ಜಿ ವಜಾಗೊಳಿಸಲು ಯೋಗ್ಯವಾಗಿದೆ. ಆದರೆ ಅರ್ಜಿದಾರರು ತಮ್ಮ ಕೋರಿಕೆಯನ್ನು ಸಂಬಂಧಪಟ್ಟ ಸಚಿವಾಲಯದ ಮುಂದೆ ಪ್ರಸ್ತಾಪಿಸಿ ಸೂಕ್ತ ನಿರ್ಧಾರದ ಉತ್ತರ ಪಡೆಯಬಹುದು ಎಂದು ನ್ಯಾಯಾಲಯ ಸಲಹೆ ಮಾಡಿದೆ.